ನವೆಂಬರ್ 1ರಿಂದ ಜೆಡಿಎಸ್‍ ಪಂಚರತ್ನ ಅಭಿಯಾನ

Social Share

ಬೆಂಗಳೂರು,ಅ.12- ಮುಂಬರುವ ವಿಧಾನಸಭೆ ಚುನಾವಣೆ ಸಿದ್ದತೆಗಳು ಆರಂಭಿಸಿರುವ ಜೆಡಿಎಸ್ ನವೆಂಬರ್ 1ರಿಂದ ಪಂಚರತ್ನ ಅಭಿಯಾನವನ್ನು ಕೈಗೊಳ್ಳಲಿದೆ. ಅಂದಿನಿಂದಲೇ ಚುನಾವಣಾ ಪ್ರಚಾರವನ್ನು ಕೂಡ ಕೈಗೊಳ್ಳಲಿದೆ. ಸುಮಾರು ಒಂದು ವರ್ಷದಿಂದಲೂ ಚುನಾವಣೆ ತಯಾರಿಯಲ್ಲಿ ತೊಡಗಿರುವ ಜೆಡಿಎಸ್ ನಾಯಕರು ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುತ್ತಿದ್ದಾರೆ.

ನ.1ರಿಂದ ಪಂಚರತ್ನ ಅಭಿಯಾನ ಕೈಗೊಳ್ಳಲಿದ್ದು, ಈ ಅಭಿಯಾನದ ನೇತೃತ್ವವನ್ನು ಆಯಾ ಕ್ಷೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲಿರುವ ಅಭ್ಯರ್ಥಿಗಳೇ ವಹಿಸಬೇಕಾಗುತ್ತದೆ.

ಪಂಚರತ್ನದ ರೂಪುರೇಷೆ, ಪಂಚರತ್ನ ಅಭಿಯಾನ ಸಾಗುವ ಮಾರ್ಗಗಳನ್ನು ಅಂತಿಮಗೊಳಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆಯಲ್ಲಿ ನಿರತರಾಗಿದ್ದಾರೆ.

ಸಂಭವನೀಯ ಅಭ್ಯರ್ಥಿಗಳಿಗೆ ಬಿಡದಿ ಬಳಿಯ ತಮ್ಮ ತೋಟದಲ್ಲಿ ಕಾರ್ಯಾಗಾರ ನಡೆಸಿ ಪ್ರಶ್ನಾವಳಿಗಳನ್ನು ನೀಡಿದ್ದರು. ಪಕ್ಷದ ನಿರ್ದೇಶನದಂತೆ ಪಕ್ಷ ಸಂಘಟನೆಯಲ್ಲಿ ಎಲ್ಲ ರೀತಿಯಲ್ಲೂ ಸಮರ್ಥರಾಗಿರುವವರನ್ನು ಗುರುತಿಸಿ ಚುನಾವಣಾ ಕಣಕ್ಕೆ ಇಳಿಸಲಾಗುತ್ತದೆ.

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಮಹಾದಾಸೆಯನ್ನು ಜೆಡಿಎಸ್ ಹೊಂದಿದೆ. ಇದಕ್ಕಾಗಿ ಜನರ ವಿಶ್ವಾಸ ಗಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಸಮಾನವಾಗಿ ನೀರಾವರಿ ಒದಗಿಸುವ ಆಶ್ವಾಸನೆಯೊಂದಿಗೆ ಜನತಾ ಜಲಧಾರೆ ಕಾರ್ಯಕ್ರಮವನ್ನು ನಡೆಸಲಾಯಿತು. ಆನಂತರ ಬೆಂಗಳೂರಿಗೆ ಸೀಮಿತವಾಗಿ ಜನತಾಮಿತ್ರ ಕಾರ್ಯಕ್ರಮ ನಡೆಸಲಾಯಿತು.

ಈ ಎರಡೂ ಕಾರ್ಯಕ್ರಮಗಳ ಸಮಾರೋಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈಗ ಪಂಚರತ್ನ ಕಾರ್ಯಕ್ರಮದ ತಯಾರಿ ನಡೆಸಲಾಗುತ್ತಿದೆ. ಶಿಕ್ಷಣವೇ ಆಧುನಿಕ ಶಕ್ತಿ. ಆರೋಗ್ಯವೇ ಸಂಪತ್ತು, ಯುವ ನವಮಾರ್ಗ ಹಾಗೂ ಮಹಿಳಾ ಸಬಲೀಕರಣ, ವಸತಿಯ ಆಸರೆ ಎಂಬ ಐದು ಯೋಜನೆಗಳನ್ನು ಪಂಚರತ್ನ ಹೆಸರಿನಲ್ಲಿ ಜನರ ಮುಂದಿಟ್ಟು ಜೆಡಿಎಸ್‍ಗೆ ಮತ ಯಾಚಿಸಲಾಗುತ್ತದೆ.

ನೀಡಿದ ಭರವಸೆಯನ್ನು 5 ವರ್ಷದಲ್ಲಿ ಈಡೇರಿಸದಿದ್ದರೆ ಜೆಡಿಎಸ್‍ನ್ನು ವಿಸರ್ಜಿಸುವುದಾಗಿ ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ. ಈ ಪಂಚರತ್ನ ಅಭಿಯಾನದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗು ಕುಮಾರಸ್ವಾಮಿಯವರು ನಾಡಿನ ಅಭಿವೃದ್ಧಿಗೆ ಮಾಡಿರುವ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು , ಅಧಿಕಾರಕ್ಕೆ ಬಂದರೆ ಕೈಗೊಳ್ಳಲಿರುವ ಕಾರ್ಯಕ್ರಮಗಳ ಪಟ್ಟಿಯನ್ನು ನೀಡಿ ಜನರ ವಿಶ್ವಾಸಗಳಿಸಲು ಪಂಚರತ್ನ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Articles You Might Like

Share This Article