ಗಣೇಶ ಹಬ್ಬದ ಬಳಿಕ ಜೆಡಿಎಸ್ ಪಂಚರತ್ನ ಕಾರ್ಯಕ್ರಮ

Social Share

ಬೆಂಗಳೂರು,ಆ.16- ಜೆಡಿಎಸ್‍ನ ಮಹತ್ವದ ಪಂಚರತ್ನ ಕಾರ್ಯಕ್ರಮ ಗಣೇಶ ಹಬ್ಬದ ನಂತರ ಆರಂಭವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ತಾತ್ಕಾಲಿಕವಾಗಿ ಪಂಚರತ್ನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಈಗಾಗಲೇ ನಡೆಸಿರುವ ಜನತಾ ಜಲಧಾರೆ ಮಾದರಿಯಲ್ಲೇ ಪಂಚರತ್ನ ಕಾರ್ಯಕ್ರಮವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಕಾರ್ಯಕ್ರಮದ ರೂಪುರೇಷೆ ಹಾಗೂ ಮಾರ್ಗಗಳನ್ನು ಅಂತಿಮಗೊಳಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಪಂಚರತ್ನ ಕಾರ್ಯಕ್ರಮದ ದಿನಾಂಕ ಅಂತಿಮಗೊಳಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪಕ್ಷದ ಮುಖಂಡರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಕುಮಾರಸ್ವಾಮಿ ಮತ್ತೆ ಆಯಾ ಕ್ಷೇತ್ರಗಳಲ್ಲಿ ವಾಸ್ತವ್ಯ ಹೂಡುವ ಉದ್ದೇಶವಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಗುರಿ ಹೊಂದಿದ್ದು, ಅದಕ್ಕಾಗಿ ಈಗಿನಿಂದಲೇ ಚುನಾವಣಾ ಸಿದ್ದತೆಯನ್ನು ಆರಂಭಿಸಿದೆ.

ಜನತಾ ಜಲಧಾರೆ ಮೂಲಕ ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಭರವಸೆ ನೀಡಿದೆ. ಪಂಚರತ್ನ ಯೋಜನೆಯ ಕಾರ್ಯಕ್ರಮಗಳನ್ನು ಈಗಾಗಲೇ ಪ್ರಕಟಿಸಿದೆ. ಶಿಕ್ಷಣ, ವಸತಿ, ಆರೋಗ್ಯ, ಉದ್ಯೋಗ ಹಾಗೂ ರೈತರ ಬದುಕನ್ನು ಉತ್ತಮಪಡಿಸುವಂತಹ ಯೋಜನೆಗಳನ್ನು ಪಂಚರತ್ನ ಕಾರ್ಯಕ್ರಮದಡಿ ಜಾರಿಗೆ ತರುವ ಭರವಸೆಯನ್ನು ಪದೇ ಪದೇ ನೀಡುತ್ತಾ ಬಂದಿದೆ.

ಬೆಂಗಳೂರು ನಗರದಲ್ಲಿ ಜನತಾ ಮಿತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಸಿದ್ದು, ಅದರ ಸಮಾರೋಪ ಸಮಾರಂಭ ಈ ತಿಂಗಳ ಅಂತ್ಯದೊಳಗೆ ನಡೆಸಲು ಉದ್ದೇಶಿಸಲಾಗಿದೆ.

ಬೃಹತ್ ಪ್ರಮಾಣದಲ್ಲಿ ಈ ಸಮಾವೇಶ ನಡೆಸಲು ಉದ್ದೇಶಿಸಿದ್ದು, ಸ್ಥಳ ಮತ್ತು ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ. ಆ ಮೂಲಕ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Articles You Might Like

Share This Article