ನವೆಂಬರ್ 2ನೇ ವಾರದಿಂದ ಪಂಚರತ್ನ ರಥಯಾತ್ರೆ ಪ್ರಾರಂಭ

Social Share

ಬೆಂಗಳೂರು,ನ.4- ನಿರಂತರ ಮಳೆಯಿಂದಾಗಿ ಮುಂದೂಡಲಾಗಿರುವ ಜೆಡಿಎಸ್ನ ಪಂಚರತ್ನ ರಥಯಾತ್ರೆಯು ನವೆಂಬರ್ ಎರಡನೇ ವಾರದಿಂದ ಪ್ರಾರಂಭವಾಗಲಿದೆ.

ಈ ರಥಯಾತ್ರೆ ಪ್ರಾರಂಭದ ದಿನವೇ ಸಮಾವೇಶ ನಡೆಸಿ ಮುಂಬರುವ ವಿಧಾನಸಭೆ ಚುನಾವಣೆಯ ನೂರು ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣೆ ಸಿದ್ಧತೆ ಪ್ರಾರಂಭಿಸುವಂತೆ ಸಂಭವನೀಯ ಅಭ್ಯರ್ಥಿಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಲಾಗಿದೆ.

ಅಲ್ಲದೆ, ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಆಯಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗೆ ವಹಿಸಲಾಗಿದೆ. ಜೆಡಿಎಸ್ನಿಂದ ಸ್ರ್ಪಸಿ ಚುನಾಯಿತರಾದ ಮೇಲೆ ಯಾವುದೇ ಕಾರಣಕ್ಕೂ ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ ಎಂಬ ಪ್ರಮಾಣ ವಚನವನ್ನು ಸಂಭವನೀಯ ಅಭ್ಯರ್ಥಿಗಳು ಸ್ವೀಕರಿಸಬೇಕಾಗುತ್ತದೆ.

ಪಂಚರತ್ನ ರಥಯಾತ್ರೆ ಮರು ಆರಂಭದ ಬಗ್ಗೆ ಪಕ್ಷದ ಮುಖಂಡರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾಲೋಚಿಸಿದ್ದು, ಮಳೆ ಬಿಡುವು ಕೊಟ್ಟ ನಂತರ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ನ.11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮ ಮುಗಿದ ನಂತರ ಪಂಚರತ್ನ ರಥಯಾತ್ರೆ ಆರಂಭವಾಗುವ ಸಾಧ್ಯತೆಗಳಿವೆ.

ಮಳೆಯ ಹಿನ್ನೆಲೆಯಲ್ಲಿ ನವೆಂಬರ್ ಒಂದರಿಂದ ಆರಂಭವಾಗಬೇಕಿದ್ದ ಈ ಯಾತ್ರೆಯನ್ನು ಒಂದು ವಾರ ಮುಂದೂಡಲಾಗಿತ್ತು. ಅಂದು ಗಡಿನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮಲೆ ಮಹಾ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಪ್ರಾರಂಭಿಸಲು ಸಿದ್ಧವಾಗಿತ್ತು.

ಜತೆಗೆ ಯಾತ್ರೆಗೆ ಅಡ್ಡಿ, ಆತಂಕಗಳು ಉಂಟಾಗದಂತೆ ಹೋಮ ನೆರವೇರಿಸಲಾಗಿತ್ತು. ಸಮಾವೇಶ ಶುರುವಾಗುವ ಮುನ್ನವೇ ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ರಥಯಾತ್ರೆ ಹಾಗೂ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಯನ್ನು ಮುಂದೂಡಲಾಗಿತ್ತು.

ಈಗಾಗಲೇ ನಿರ್ಧರಿಸಿರುವ ಮಾರ್ಗದಲ್ಲಿ ಮೊದಲ ಹಂತದ ಯಾತ್ರೆ ನಡೆಯಲಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಹ 1994ರಲ್ಲಿ ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿದ್ದರು.

2023ರ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲುವು ಸಾಸಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಬೇಕು ಎಂಬ ಗುರಿ ಹೊಂದಿರುವ ಕುಮಾರಸ್ವಾಮಿ ಅವರು ಕೂಡ ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Articles You Might Like

Share This Article