ನ. 1ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭ

Social Share

ಬೆಂಗಳೂರು,ಅ.30- ಕಾಂಗ್ರೆಸ್‍ನ ಭಾರತ ಐಕ್ಯತಾ ಯಾತ್ರೆ ಆಡಳಿತಾರೂಢ ಬಿಜೆಪಿಯ ಜನ ಸಂಕಲ್ಪ ಯಾತ್ರೆಯ ಬೆನ್ನಲ್ಲೇ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಸಲು ಅಣಿಯಾಗಿದೆ. ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಗಡಿನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಪಂಚರತ್ನ ಯಾತ್ರೆಯನ್ನು ಆರಂಭಿಸಲು ಸಜ್ಜಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದೆ.

ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ಹೆಸರಿನಲ್ಲಿ ಈ ರಥ ಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ.

ನವೆಂಬರ್ 1ರಂದು ಬೆಳಗ್ಗೆ 9 ಗಂಟೆಗೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಂಚರತ್ನ ಯಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಅಂದು ಮಧ್ಯಾಹ್ನ ಮುಳಬಾಗಿಲಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

ನಗರದ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಕ್ಕೆ ಸಾಂಕೇತಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಮುಂಬರುವ ಚುನಾವಣೆಯ ಪ್ರಣಾಳಿಕೆ ಅಂಶಗಳನ್ನು ಈ ರಥಯಾತ್ರೆ ಸಂದರ್ಭದಲ್ಲಿ ಜನರ ಮುಂದಿಟ್ಟು ಜನಾಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ಮೊದಲ ಹಂತದಲ್ಲಿ ನವೆಂಬರ್ 1ರಿಂದ ಡಿಸೆಂಬರ್ 6ರವರೆಗೂ ಈ ಯಾತ್ರೆ ಸಾಗಲಿದೆ.

1994ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಹ ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿ ಸ್ವಂತ ಶಕ್ತಿಯ ಮೇಲೆ ಅಕಾರಕ್ಕೆ ಬಂದಿದ್ದರು. ಹೀಗಾಗಿ ಜೆಡಿಎಸ್ ಕೂಡ ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದೆ.

ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ..?

ಈ ರಥ ಯಾತ್ರೆಯ ಉಸ್ತುವಾರಿಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಸಂಭವನೀಯ ಅಭ್ಯರ್ಥಿಗಳಿಗೆ ವಹಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ಈ ರಥ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲ ಹಂತದ ರಥಯಾತ್ರೆಯ ಮಾರ್ಗ ನಕ್ಷೆ ಪ್ರಕಾರ ನ.1ರಂದು ಮುಳಬಾಗಿಲು, ನ.2 ಬಂಗಾರಪೇಟೆ, ನ.3 ಮಾಲೂರು, ನ.4ರಂದು ಕೋಲಾರ, ನ.5ರಂದು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಸಾಗಲಿದೆ. ನ.6 ಚಿಂತಾಮಣಿ, ನ.7 ಶಿಡ್ಲಘಟ್ಟ, ನ.8 ಬಾಗೇಪಲ್ಲಿ, ನ.9 ಗೌರಿಬಿದನೂರು, ನ.10 ಚಿಕ್ಕಬಳ್ಳಾಪುರ, ನ.11 ದೊಡ್ಡಬಳ್ಳಾಪುರ, ನ.12 ದೇವನಹಳ್ಳಿ, ನ.13 ನೆಲಮಂಗಲದಲ್ಲಿ ಪಂಚರತ್ನ ರಥ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಅಮ್ಮ-ಮಕ್ಕಳ ಪಕ್ಷ ದೆಹಲಿ ಸೇರುತ್ತೆ, ಅಪ್ಪ-ಮಕ್ಕಳ ಪಕ್ಷ ಸಮುದ್ರಕ್ಕೆ ಬೀಳುತ್ತೆ, ಹುಲಿಯಾ ಕಾಡಿಗೆ, ಬಂಡೆ ಛಿದ್ರ

ನ.14ರಿಂದ 22ರವರೆಗೆ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲೂ ರಥಯಾತ್ರೆ ಸಾಗಲಿದ್ದು, ಹಾಸನ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನ.23ರಿಂದ 29ರವರೆಗೆ ಹಾಸನ ಜಿಲ್ಲೆಯ ತಾಲ್ಲೂಕುಗಳಲ್ಲಿ ರಥಯಾತ್ರೆ ಸಂಚರಿಸಲಿದೆ.
ನ.30ರಂದು ಕುಣಿಗಲ್, ಡಿ.1ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಾಗುವ ರಥಯಾತ್ರೆಯು ಡಿ.2ರಂದು ಮಾಗಡಿ, ಡಿ.3 ರಾಮನಗರ, ಡಿ.4 ಚನ್ನಪಟ್ಟಣ, ಡಿ.5 ಕನಕಪುರ ಹಾಗೂ ಡಿ.6ರಂದು ಆನೇಕಲ್ ತಾಲ್ಲೂಕನಲ್ಲಿ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Articles You Might Like

Share This Article