ಎರಡು ದಾಖಲೆ ನಿರ್ಮಿಸಿದ ಜೆಡಿಎಸ್ ಪಂಚರತ್ನ ರಥಯಾತ್ರೆ

Social Share

ತುಮಕೂರು,ಡಿ.30- ಕಳೆದ ನವೆಂಬರ್ 18ರಿಂದ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ದಾಖಲೆಗೆ ಪಾತ್ರರಾಗಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿನ್ನೆ ಇಡೀ ದಿನ ಯಾತ್ರೆ ನಡೆಸಿ ಕಳೆದ ರಾತ್ರಿ ಕ್ಷೇತ್ರದ ಯಲ್ಲಾಪುರದಲ್ಲಿ ಎಚ್‍ಡಿಕೆ ಗ್ರಾಮ ವಾಸ್ತವ್ಯ ಹೂಡಿದ್ದರು.
ಆ ಗ್ರಾಮಕ್ಕೆ ಆಗಮಿಸಿದ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನ ತೀರ್ಪುಗಾರ ಆರ್.ಹರೀಶ್,ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆ ಪತ್ರಗಳು ಮತ್ತು ಮೆಡಲ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ತೀರ್ಪುಗಾರರಾದ ಮೋಹಿತ್‍ಕುಮಾರ್ ಅವರು, ಇದೊಂದು ವಿಶೇಷವಾದ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರೇ ಬೆಳೆದ ಫಸಲನ್ನೇ ಬೃಹತ್ ಹಾರಗಳನ್ನಾಗಿ ತಯಾರಿಸಿ ಅವರಿಗೆ ಹಾಕಿ ಸ್ವಾಗತಿಸುತ್ತಿರುವುದು ಸೋಜಿಗ ಮೊದಲ ದಾಖಲೆ ಎಂದರು.

ನಾವು ಸದಾ ದಾಖಲೆಗಳನ್ನು ಹುಡುಕುತ್ತಿರುತ್ತೇವೆ. ದೇವನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಕೃಷಿ ಬೆಳೆಗಳಿಂದ ತಯಾರಿಸಿದ ಭಾರೀ ಹಾರಗಳನ್ನು ಹಾಕಿ ಬರಮಾಡಿಕೊಂಡ ಬಗ್ಗೆ ಮಾಹಿತಿ ಸಿಕ್ಕಿತು. ಅಂದಿನಿಂದಲೇ ನಾವು ಖುದ್ದು ಪರಿಶೀಲನೆ ಮಾಡಿದೆವು. ನಿನ್ನೆಯೂ ನಾವು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಥಯಾತ್ರೆಯ ಜತೆಗೆ ಪ್ರವಾಸ ಮಾಡಿದೆವು. ಬೃಹತ್ ಹಾರಗಳ ಗೌರವಕ್ಕೆ ಭಾಜನರಾದ ಏಕೈಕ ವ್ಯಕ್ತಿ ಕುಮಾರಸ್ವಾಮಿ ಅವರು ಎಂದು ಮೋಹಿತ್ ಕುಮಾರ್ ಮಾಹಿತಿ ನೀಡಿದರು.

ರೈತರಿಗೆ, ಕಾರ್ಯಕರ್ತರಿಗೆ ಸಮರ್ಪಣೆ:

ಈ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಇದು ನನಗೆ ಅಚ್ಚರಿಯ ಗೌರವ. ಈ ದಾಖಲೆಗಳನ್ನು ನನ್ನ ನಾಡಿನ ರೈತರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.

ನಾನು ರಥಯಾತ್ರೆ ಮಾಡುತ್ತಿರುವ ಎಲ್ಲಾ ಕಡೆ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹಾರಗಳನ್ನು ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಆ ಜನರ ಪ್ರೀತಿಯಿಂದ ಮಾತ್ರ ಈ ದಾಖಲೆ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಈ ಎಲ್ಲಾ ದಾಖಲೆಯ ಹೆಗ್ಗಳಿಕೆ ಅವರಿಗೇ ಸಲ್ಲಬೇಕು ಎಂದರು.

ಪಂಚರತ್ನ ಯಾತ್ರೆ ಆರಂಭವಾಗಿ 33ನೇ ದಿನ ಪೂರೈಸಿದೆ. ಈ ಯಾತ್ರೆಯಲ್ಲಿ ಜನರು ಪ್ರೀತಿಯಿಂದ ಹಾಕಿದ ಹಾರಗಳು ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ ಮತ್ತು ಇಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ದಾಖಲಾಗಿರುವುದು ಸಂತಸ ಉಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ನೊಂದೆಡೆ ಪಂಚರತ್ನ ಯಾತ್ರೆ ಇದೀಗ 34ನೇ ದಿನಕ್ಕೆ ಕಾಲಿಟ್ಟಿದೆ. ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ನಿನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರ ಒಂದರಲ್ಲೇ 30ಕ್ಕೂ ಹೆಚ್ಚು ಬೃಹತ್ ಹಾರಗಳನ್ನು ಮಾಜಿ ಮುಖ್ಯಮಂತ್ರಿ ಅವರಿಗೆ ಹಾಕಿ ಗೌರವಿಸಲಾಯಿತು.

ಈ ಕ್ಷೇತ್ರದಲ್ಲಿ ಸೇಬು, ಸೌತೆಕಾಯಿ, ಕೊಬರಿ, ಕಬ್ಬಿನ ಹಾರಗಳ ಜತೆಗೆ ನಾಣ್ಯದ ಹಾರ, ಭತ್ತ ನೇಗಿಲು ಹಾರ, ಎತ್ತಿನ ಲಾಳದ ಹಾರ, ಜೆಡಿಎಸ್ ಚಿಹ್ನೆ ಹಾರ, ಮಣ್ಣಿನ ಹಾರ, ಕಿರೀಟದ ಹಾರ, ಮಹಿಳೆಯರು ಹಾಕಿದ ರಾಖಿ ಹಾರ , ಕರ್ಜಿಕಾಯಿ ಹಾರ, ವಿವಿಧ ತರಕಾರಿಗಳ ಹಾರ, ವಿವಿಧ ಹಣ್ಣುಗಳ ಹಾರ, ಎಲ್ ಇ ಡಿ ಹಾರ ಸೇರಿದಂತೆ ಒಂದೇ ದಿನ 30ಕ್ಕೂ ಹೆಚ್ಚು ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜಿನಪ್ಪ ಮುಂತಾದವರು ಇದ್ದರು.

#JDS, #PancharatnaYatra, #Record,

Articles You Might Like

Share This Article