ಭಾವಚಿತ್ರಗಳನ್ನು ತಿರುಚಿ ಬಿಜೆಪಿ ನಾಯಕರ ತೇಜೋವಧೆ ಮಾಡಿದ ಜೆಡಿಎಸ್ ಕಾರ್ಯಕರ್ತನ ಅರೆಸ್ಟ್

ಬೆಂಗಳೂರು , ಮೇ 8- ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ಬಿಜೆಪಿ ಮುಖಂಡರ ಭಾವಚಿತ್ರಗಳನ್ನು ತಿರುಚಿ ತೇಜೋವಧೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಆರೋಪದಡಿ ಯುವಕನೊಬ್ಬನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ದಾಸರಹಳ್ಳಿಯ ಲಕ್ಷ್ಮೀಪುರದ ಚರಣ್ ಬಂಧಿತನಾಗಿದ್ದು, ಈ ಬಗ್ಗೆ ಮಾಜಿ ಶಾಸಕ ಮುನಿರಾಜು ಮತ್ತು ಬಿಜೆಪಿ ಕಾರ್ಯಕರ್ತರು ಆರೋಪಿ ವಿರುದ್ಧ ಮೂರು ಪ್ರತ್ಯೇಕ ದೂರು ನೀಡಿದ್ದರು.

ಈ ಸಂಬಂಧ ಸೈಬರ್ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವರ ಮುಖಗಳನ್ನು ಬೇರೆಯವರ ಚಿತ್ರಗಳ ಜತೆ ಸೇರಿಸಿ ಅನಾಮಧೇಯರ ಹೆಸರಿನಲ್ಲಿ ಹಲವು ತಿಂಗಳುಗಳಿಂದ ಫೇಸ್‍ಬುಕ್ ಪುಟಗಳಲ್ಲಿ ಹರಿ ಬಿಡಲಾಗುತ್ತಿತ್ತು. ಸುಳ್ಳು ಆರೋಪಗಳನ್ನು ಮಾಡಲಾಗುತ್ತಿತ್ತು.

ನನ್ನ ವಿರುದ್ಧವೂ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ನಿಂದಿಸಲಾಗುತಿತ್ತು. ತೇಜೋವಧೆ ಕುರಿತು ನಾನು ಹಾಗೂ ಬಿಜೆಪಿ ಕಾರ್ಯಕರ್ತರು ದೂರು ನೀಡಿದ್ದೇವು ಎಂದು ಮಾಜಿ ಶಾಸಕ ಮುನಿರಾಜು ತಿಳಿಸಿದರು.ಬಂಧಿತ ಆರೋಪಿ ಜೆಡಿಎಸ್ ಕಾರ್ಯಕರ್ತನೆಂದು ಹೇಳಲಾಗುತ್ತಿದೆ.

Sri Raghav

Admin