ಅಧಿವೇಶನದ ಸಮಯ ಹಾಳು ಮಾಡುತ್ತಿರುವ ಕಾಂಗ್ರೆಸ್-ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ

Social Share

ಬೆಂಗಳೂರು,ಫೆ.21- ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಸಮಯವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಳು ಮಾಡುತ್ತಿವೆ ಎಂದು ಆರೋಪಿಸಿ ಜೆಡಿಎಸ್ ಶಾಸಕರು ಇಂದು ಪ್ರತಿಭಟನೆ ನಡೆಸಿದರು. ವಿಧಾನಸೌಧ ಮತ್ತು ವಿಕಾಸಸೌಧದ ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಫಲಕಗಳನ್ನು ಹಿಡಿದು, ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪುರ್, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಉಭಯ ಸದನಗಳ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಈಗಾಗಲೇ ಒಂದು ವಾರದ ಸಮಯ ಕಳೆದಿದೆ. ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಬೇಕೆಂದು ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಬಿಜೆಪಿ ಸರ್ಕಾರಕ್ಕೂ ಹೊಣೆಗಾರಿಕೆ ಇದೆ.
ಪ್ರತಿಭಟನಾ ನಿರತರನ್ನು ಮನವೊಲಿಸಿ ಸುಗಮ ಕಲಾಪ ನಡೆಸಬೇಕು. ಪ್ರತಿಭಟನಾ ನಿರತರನ್ನು ಸದನದಿಂದ ಹೊರ ಹಾಕಿ ಕಲಾಪ ನಡೆಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಒತ್ತಾಯಿಸಿದರು.
ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಚರ್ಚಿಸಿ ಪರಿಹಾರ ಪಡೆದುಕೊಳ್ಳಬೇಕಿದೆ. ವಾರ್ಷಿಕ 60 ದಿನ ಅಧಿವೇಶನ ನಡೆಸಬೇಕು ಎಂದು ಕಾಯ್ದೆ ಮಾಡಿಕೊಂಡಿದ್ದೇವೆ. ಸದನದಲ್ಲಿ ಪಾಲ್ಗೊಳ್ಳುವುದು ಎಲ್ಲ ಸದಸ್ಯರ ಹಕ್ಕು, ರಾಜ್ಯದ ,ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರದಿಂದ ಉತ್ತರ ಪಡೆಬೇಕಾಗಿದೆ.
ಕೋವಿಡ್‍ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಒಂದು ಲಕ್ಷ ರೂ ಪರಿಹಾರ ನೀಡುವುದು ಶೇ.80ರಷ್ಟು ಪಾವತಿಯಾಗಿಲ್ಲ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಗಿ, ಹತ್ತಿ, ಭತ್ತ, ಕಾಫಿ, ಮೆಣಸು ಬೆಂಬಲ ಬೆಲೆ ಸಿಕ್ಕಿಲ್ಲ. ಈ ಅಹೋರಾತ್ರಿ ಧರಣಿ ನಡೆಸುತ್ತಿರುವ ಸದಸ್ಯರ ಮನವೊಲಿಸಿ ಸುಗಮ ಕಲಾಪ ನಡೆಸಬೇಕು.ಬಿಜೆಪಿಗೂ ಕೂಡ ಅಧಿವೇಶ ನಡೆಸಲು ಸಾಧ್ಯವಾಗುತ್ತಿಲ್ಲ. ಸಮಯದ ವ್ಯರ್ಥಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
# ಮ್ಯಾಚ್ ಫಿಕ್ಸಿಂಗ್:
ಕಾಂಗ್ರೆಸ್-ಬಿಜೆಪಿ ಮ್ಯಾಚ್ ಫಿಕ್ಸ್ ಮಾಡಿಕೊಂಡು ಸದನದ ಕಲಾಪವನ್ನು ಹಾಳು ಮಾಡುತ್ತಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪುರ್ ಆರೋಪಿಸಿದರು. ವಿಧಾನಪರಿಷತ್ ಸಭಾಪತಿ ಮತ್ತು ವಿಧಾನಸಭಾಧ್ಯಕ್ಷರನ್ನು ಮನವಿ ಮಾಡುತ್ತೇನೆ. ಧರಣಿನಿರತರ ಮನವೊಲಿಸಿ ಕಲಾಪ ನಡೆಸಬೇಕು.
ಸಾಧ್ಯವಾಗಿದ್ದರೆ ಅವರನ್ನು ಹೊರಗಿಟ್ಟು ಸದನ ನಡೆಸಬೇಕು. ಮೇಕೆದಾಟು, ಕಾವೇರಿ ವಿಚಾರದಲ್ಲಿ ಚರ್ಚೆ ಮಾಡಬೇಕಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗಿಲ್ಲ. ರಾಗಿ, ಮೆಕ್ಕೆಜೋಳ ಖರೀದಿಯಾಗುತ್ತಿಲ್ಲ. ಗೋವಾದಲ್ಲಿ ಒಂದು ಹೇಳುತ್ತಾರೆ, ಇಲ್ಲೊಂದು ಹೇಳುತ್ತಾರೆ. ಕೋಟ್ಯಂತರ ರೂ. ಸದನ ನಡೆಯದೇ ವ್ಯರ್ಥವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಸಿ.ಎಸ್.ಪುಟ್ಟರಾಜು, ಡಾ.ಅನ್ನದಾನಿ, ಕೃಷ್ಣಾರೆಡ್ಡಿ, ಕೆ.ಟಿ.ಶ್ರೀಕಂಠೇಗೌಡ, ಬೋಜೇಗೌಡ, ವೀರಭದ್ರ, ನಿಸರ್ಗ ನಾರಾಯಣಸ್ವಾಮಿ ಮತ್ತಿತರರು ಇದ್ದರು.

Articles You Might Like

Share This Article