ಬೆಂಗಳೂರು, ಸೆ.14- ಹಿಂದಿ ದಿವಸ್ ವಿರೋಧಿಸಿ ಜೆಡಿಎಸ್ ಶಾಸಕರು ಮತ್ತು ಮುಖಂಡರು ತೋಳಿಗೆ ಕಪ್ಪುಪಟ್ಟಿ ಧರಿಸಿ ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಮಹಾತ್ಮ ಗಾಂೀಧಿಜಿ ಪ್ರತಿಮೆ ಬಳಿ ಇಂದು ಪ್ರತಿ ಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಅನ್ನದಾನಿ, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಬೋಜೇಗೌಡ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ಹೇರಿಕೆ ನಿಲ್ಲಿಸಿ. ಹಿಂದಿ ದಿವಸ್ ನಮಗೆ ಬೇಡ ಎಂಬ ಫಲಕಗಳನ್ನು ಪ್ರದರ್ಶಿಸಿ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಕನ್ನಡವೇ ಸತ್ಯ, ಕನ್ನಡವೇನಿತ್ಯ ಹಾಡನ್ನು ಹಾಡಿದರು ಈ ಸಂದರ್ಭದಲ್ಲಿ ಮಾತನಾಡಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸರ್ಕಾರದ ಹಿಂದಿ ದಿವಸ್ ಆಚರಣೆಗೆ ನಮ್ಮ ತೀವ್ರ ವಿರೋಧವಿದೆ. ಸ್ವಾತಂತ್ರ್ಯ ಬಂದು 75 ವರ್ಷವಾಗಿ ಅಮೃತ ಮಹೋತ್ಸವ ಆಚರಿಸಿದ್ದೇವೆ. ಒಂದು ರಾಷ್ಟ್ರ, ಒಂದೇ ಭಾಷೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಆಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಕೆದುಕುತ್ತಿದ್ದಾರೆ.
ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ
ಒಡಿಶಾದಲ್ಲಿ ಒರಿಯಾ, ಗುಜರಾತ್‍ನಲ್ಲಿ ಗುಜರಾತಿ ಹೀಗೆ ಒಂದೊಂದು ರಾಜ್ಯದಲ್ಲೂ ಒಂದೊಂದು ಭಾಷೆಯಿದೆ. 56 ಪ್ರಮುಖ ಭಾಷೆಗಳು, ಭಾಷಿಕರು ನೆಲಸಿದ್ದಾರೆ. ಆಯಾ ರಾಜ್ಯದ ಭಾಷೆ ಕತ್ತನ್ನು ಹಿಸುಕುವ ಕೆಲಸಕ್ಕೆ ನಮ್ಮ ವಿರೋಧವಿದೆ. ಜನತೆಯ ತೆರಿಗೆ ಹಣವನ್ನು ಖರ್ಚು ಮಾಡಿ ಹಿಂದಿ ದಿವಸ್ ಆಚರಣೆಯನ್ನು ಖಂಡಿಸುತ್ತೇವೆ. ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಇದು.
ಇದರ ವಿರುದ್ಧ ನಮ್ಮ ಪ್ರತಿಭಟನೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಪ್ರವಾಹ, ಅತಿವೃಷ್ಟಿಗೆ ಸಿಲುಕಿ ಜನ ತತ್ತರಿಸುತ್ತಿದ್ದಾರೆ. ಅಂಥವರ ನೆರವಿಗೆ ಬಾರದ ಕೇಂದ್ರ ಸರ್ಕಾರ ಭಾವೈಕ್ಯತೆಗೆ ಧಕ್ಕೆ ತಂದು ಸಾಮರಸ್ಯ ಹಾಳುವ ಮಾಡುವ ಕೆಲಸ ಮಾಡುತ್ತಿದೆ.ಇದಕ್ಕೆ ನಮ್ಮ ಕ್ಕಾರವಿದೆ ಎಂದರು.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-09-2022)
ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಗೌರವಿಸಬೇಕು. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಬಲವಂತವಾಗಿ ಹಿಂದಿ ದಿವಸ ಆಚರಣೆಗೆ ಅವಕಾಶ ನೀಡಬಾರದು. ಜನರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡಬಾರದು ಎಂದು ಮೊನ್ನೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಹಿಂದಿ ದಿವಸ ಆಚರಣೆಗೆ ಅವಕಾಶ ನೀಡಿದರೆ ಕನ್ನಡ ಮತ್ತು ಕನ್ನಡಿಗರಿಗೆ ಅನ್ಯಾಯವಾಗಲಿದೆ ಪತ್ರದಲ್ಲಿ ಎಂದು ಉಲ್ಲಖಿಸಿದ್ದರು. ಇಂದು ಪ್ರತಿಭಟನೆ ನಡೆಸಿ, ಯಾವುದೇ ಕಾರಣಕ್ಕೂ ಬಲವಂತದ ಹಿಂದಿ ದಿನಾಚರಣೆ ಆಚರಿಸಬಾರದು ಎಂದು ಒತ್ತಾಯಿಸಿದ್ದಾರೆ.