‘ರೈತ ಸಂಕ್ರಾಂತಿ’ ಹೆಸರಲ್ಲಿ ರೈತರೊಂದಿಗೆ ಜೆಡಿಎಸ್ ಅನ್ ಲೈನ್ ಸಂವಾದ

Social Share

ಬೆಂಗಳೂರು, ಜ.15-ಕೃಷಿ ಸಮಸ್ಯೆಗಳ ಕುರಿತಂತೆ ರಾಜ್ಯದ ರೈತರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಲು ಜೆಡಿಎಸ್ ನಾಳೆ ರೈತ ಸಂಕ್ರಾಂತಿ ಎಂಬ ಅನ್ ಲೈನ್ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಾಳೆ ಸಂಜೆ 4ರಿಂದ 6 ಗಂಟೆವರೆಗೂ ರೈತರ ಜತೆ ಸಂವಾದ ನಡೆಸಲಿದ್ದು, ಸುಮಾರು 50ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ರೈತರ ಜತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅನ್ ಲೈನ್ ವೇದಿಕೆ ಮೂಲಕ ನೇರ ಸಂವಾದ ನಡೆಸಲಾಗುತ್ತದೆ.

ಬಿಡದಿ ಬಳಿಯ ಕುಮಾರಸ್ವಾಮಿ ಅವರ ತೋಟದಲ್ಲಿ ರೈತ ಸಂಕ್ರಾಂತಿ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಭಾಗದ ರೈತರು ಈ ಸಂವಾದದಲ್ಲಿ ಭಾಗಿಯಾಗಿ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರಗಳನ್ನು ಹಂಚಿಕೊಳ್ಳಬಹುದು ಎಂದು ಜೆಡಿಎಸ್ ತಿಳಿಸಿದೆ.

ರೈತರ ಸಮಗ್ರ ಕಲ್ಯಾಣಕ್ಕಾಗಿ ರೂಪಿಸಿರುವ ಪಂಚರತ್ನ ಯೋಜನೆಗಳಲ್ಲಿ ರೈತ ಚೈತನ್ಯ ಕಾರ್ಯಕ್ರಮ ಒಂದಾಗಿದ್ದು, ಕುಮಾರಸ್ವಾಮಿ ಅವರು, ನಾಡಿನ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ರೈತ ಸಂಕ್ರಾಂತಿ ಸಂವಾದವನ್ನು ನಡೆಸಲಿದ್ದಾರೆ.

ನೆರೆ, ಬರ, ಬೆಳೆ ಹಾನಿ, ಕೀಟಬಾಧೆ, ನೀರಾವರಿ ಹಾಗೂ ಬೆಲೆ ಕುಸಿತದಂತಹ ಹತ್ತು ಹಲವು ಸಮಸ್ಯೆಗಳನ್ನು ಅನ್ನದಾತರು ಎದುರಿಸುತ್ತಾರೆ. ಅ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರಿಂದಲೇ ಸಮಸ್ಯೆಗಳಿಗೆ ಪರಿಹಾರ ರೂಪದ ಸಲಹೆಗಳನ್ನು ಸಂವಾದದಲ್ಲಿ ಪಡೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೈತ ಸಂಕ್ರಾಂತಿಯ ಲಾಂಛನವನ್ನು ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲೇ ಕಲಬುರಗಿ ಜಿಲ್ಲೆಯ ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಗಿದೆ. ಮಹತ್ವದ ಈ ಸಂವಾದದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಭಾಗಿಯಾಗಲಿದ್ದಾರೆ.

ಕಳೆದ 40ಕ್ಕೂ ಹೆಚ್ಚು ದಿನಗಳಿಂದ ಪಂಚರತ್ನ ರಥಯಾತ್ರೆ ಕೈಗೊಳ್ಳಲಾಗಿದ್ದು, ಈ ಸಂವಾದ ನಂತರ ಯಾತ್ರೆಯನ್ನು ಮಾರ್ಚ್ 20ರವರೆಗೂ ಮುಂದುವರೆಸಲಾಗುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 2006 ಮತ್ತು 2018ರಲ್ಲಿ ಎರಡು ಬಾರಿ ಸಾಲ ಮನ್ನಾ ಮಾಡಿದರೂ ರೈತರ ಸಮಸ್ಯೆಗಳು ನಿವಾರಣೆ ಆಗಿಲ್ಲ. ರೈತರ ಆತ್ಮಹತ್ಯೆಯೂ ನಿಂತಿಲ್ಲ.

ಹೀಗಾಗಿ ರೈತರು ಶಾಶ್ವತವಾಗಿ ಸಾಲಗಾರರಾಗದಂತೆ ಹಾಗೂ ಅವರಿಗೆ ಆರ್ಥಿಕ ಚೈತನ್ಯ ನೀಡುವ ಉದ್ದೇಶದಿಂದ ರೂಪಿಸಿರುವ ರೈತ ಚೈತನ್ಯ ಕಾರ್ಯಕ್ರಮದ ಬಗ್ಗೆ ಅನ್ನದಾತರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಕೃಷಿ ಸಮಸ್ಯೆಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾನು ರೈತರ ಜತೆ ಸಂವಾದ ನಡೆಸಲು ಉದ್ದೇಶಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

#JDS, Kumaraswamy, #RaitaSankranthi,

Articles You Might Like

Share This Article