ಪಾಟ್ನಾ,ನ. 2- ಕಳೆದ ಮೂರು ದಿನಗಳ ಹಿಂದೆ ಮೋಕಾಮಾದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನ್ ಸುರಾಜ್ ಬೆಂಬಲಿಗ ದುಲರ್ ಚಂದ್ ಯಾದವ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಇಂದು ಜೆಡಿಯು ಅಭ್ಯಥಿ ಅನಂತ್ ಕುಮಾರ್ ಸಿಂಗ್‌ನನ್ನು ಬಂಧಿಸಿದ್ದಾರೆ.
ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಡಿಯು ಅಭ್ಯರ್ಥಿಯನ್ನು ಬೆಳಗಿನ ಜಾವ ಮೊಕಾಮಾದ ಅವರ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ ಶರ್ಮಾ ಅವರ ಬಂಧನವನ್ನು ದೃಢಪಡಿಸಿದರು. ಆದಾಗ್ಯೂ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.
ಗುರುವಾರ ಪಾಟ್ನಾದ ಮೋಕಾಮಾ ಪ್ರದೇಶದಲ್ಲಿ ಜನ್ ಸುರಾಜ್
ಪಕ್ಷದ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದಾಗ ಯಾದವ್ ಸಾವನ್ನಪ್ಪಿದ್ದರು. ಮೋಕಾಮಾ ಪ್ರದೇಶದ ಭದೌರ್ ಮತ್ತು ಘೋಸ್ವರಿ ಪೊಲೀಸ್ ಠಾಣೆಗಳ ಬಳಿ ಈ ಘಟನೆ ನಡೆದಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೃತರ ಮೊಮಗ ಸಲ್ಲಿಸಿದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಒಂದರಲ್ಲಿ ಅನಂತ್ ಸಿಂಗ್ ಸೇರಿದಂತೆ ಇತರ ನಾಲ್ವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.
