55 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ ಚೋರರ ಪತ್ತೆಗಾಗಿ 2 ವಿಶೇಷ ತಂಡ ರಚನೆ

Social Share

ಬೆಂಗಳೂರು,ಫೆ.24- ಡ್ರಿಲ್ಲಿಂಗ್ ಯಂತ್ರದಿಂದ ಗೋಡೆ ಕೊರೆದು ಜ್ಯುವೆಲರ್ ಅಂಗಡಿಯೊಳಗೆ ನುಸುಳಿ 55 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.
ಆರೋಪಿಗಳ ಪತ್ತೆಗೆ ರಚಿಸಲಾಗಿರುವ ಈ ತಂಡಗಳು ಜ್ಯುವೆಲರಿ ಅಂಗಡಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿ ಪುಟೇಜ್‍ಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿವೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಡ್ರಿಲ್ಲಿಂಗ್ ಯಂತ್ರಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದು, ಅವರ ಮೇಲೆರುವ ಬೆರಳಚ್ಚುಗಳ ಸಹಾಯದಿಂದ ಆರೋಪಿಗಳ ಬಂಧನಕ್ಕೆ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
ಚಾಲಾಕಿ ಇಬ್ಬರು ಖದೀಮರು ಯೋಜನೆ ರೂಪಿಸಿಕೊಂಡು ಥಣೀಸಂದ್ರ ಮುಖ್ಯರಸ್ತೆ ಸಾರಾಯಿ ಪಾಳ್ಯದಲ್ಲಿ ರಾಘವೇಂದ್ರ ಜ್ಯೂವೆಲರ್ಸ್ ಅಂಗಡಿಗೆ ಕನ್ನ ಹಾಕಲು ಮೊನ್ನೆ ತಡರಾತ್ರಿ ಬಂದಿದ್ದಾರೆ.
ಅಂಗಡಿಗೆ ಹೊಂದಿಕೊಂಡಂತೆ ಪಕ್ಕದ ಕಟ್ಟಡಕ್ಕೆ ಹೋಗಲು ಮೆಟ್ಟಿಲುಗಳಿದ್ದ ಭಾಗದ ಗೋಡೆಯನ್ನು ಕಳ್ಳರು ಡ್ರಿಲ್ಲಿಂಗ್ ಯಂತ್ರ ಬಳಸಿ ಕೊರೆದಿದ್ದಾರೆ. ನಂತರ ಒಬ್ಬ ಒಳಗೆ ನುಸುಳಿ ಚೀಲದಲ್ಲಿ 1ಕೆಜಿ 300 ಗ್ರಾಂ ತೂಕದ ಆಭರಣಗಳನ್ನು ತುಂಬಿಕೊಂಡು ಹೊರಗಡೆ ನಿಂತಿದ್ದವನಿಗೆ ಕೊಟ್ಟು ನಂತರ ಅಂಗಡಿಯಲ್ಲಿದ್ದ ಸಿಸಿ ಟಿವಿ ಡಿವಿಆರ್ ತೆಗೆದುಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.
ಬೆಳಗ್ಗೆ ಎಂದಿನಂತೆ ಜ್ಯುವೆಲರಿ ಅಂಗಡಿ ಮಾಲೀಕ ಇಳಂಗೋವನ್ ಅವರು ಬಂದು ಬಾಗಿಲು ತೆಗೆದಾಗಲೇ ಗೋಡೆ ಕೊರೆದು ಚಿನ್ನಾಭರಣ ದೋಚಿರುವುದು ಗೊತ್ತಾಗಿದೆ.

Articles You Might Like

Share This Article