ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಾಲೀಕರ ಕೈ-ಕಾಲು ಕಟ್ಟಿ ಸುಲಿಗೆ : ಮೂವರ ಬಂಧನ

Spread the love

ಬೆಂಗಳೂರು, ಮೇ 22- ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ಹೋಗಿ ಮಾಲೀಕರ ಕೈ-ಕಾಲು ಕಟ್ಟಿ ಬಾಯಿಗೆ ಗಮ್‍ಟೇಪ್ ಸುತ್ತಿ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದ ಮೂವರನ್ನು ನಂದಿನಿಲೇಔಟ್ ಠಾಣೆ ಪೊಲೀಸರು ಬಂಧಿಸಿ 1.5ಲಕ್ಷ ರೂ. ಮೌಲ್ಯ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರವಾಹನ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಂದಿನಿಲೇಔಟ್‍ನ 2ನೇ ಕ್ರಾಸ್, 2ನೇ ಬ್ಲಾಕ್ ಮನೆಯನ್ನು ಬಾಡಿಗೆ ಕೇಳುವ ನೆಪದಲ್ಲಿ ಮೇ 9ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಮೂವರು ಬಂದಿದ್ದಾರೆ. ಪಿರ್ಯಾದುದಾರರ ಕಟ್ಟಡದ ಎರಡನೇ ಮಹಡಿಯ ಮನೆ ನೋಡುವ ನೆಪದಲ್ಲಿ ಹೋಗಿ ಮನೆ ಗಲೀಜಾಗಿದೆ ನೋಡಿ ಎಂದು ಅವರನ್ನು ಒಳಗೆ ಕರೆದು ಕೈ-ಕಾಲು ಕಟ್ಟಿಹಾಕಿ, ಬಾಯಿ ಮತ್ತು ಕುತ್ತಿಗೆಗೆ ಗಮ್‍ಟೇಪ್ ಸುತ್ತಿ ಅವರ ಮೈ ಮೇಲಿದ್ದ 48 ಗ್ರಾಂ ಚಿನ್ನದ ಮಾಂಗಲ್ಯ ಸರ, ಮುತ್ತಿನ ಓಲೆ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ನಂದಿನಿಲೇಔಟ್ ಠಾಣೆ ಪೊಲೀಸರು ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಕಾರಿಗಳು ಇನ್ಸ್‍ಪೆಕ್ಟರ್ ವೆಂಕಟೇಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಈ ತಂಡ ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಸುಮಾರು 1.5 ಲಕ್ಷ ರೂ. ಬೆಲೆ ಬಾಳುವ 48 ಗ್ರಾಂ ಮಾಂಗಲ್ಯ ಸರ, ಮುತ್ತಿನ ಓಲೆ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ, ಮಚ್ಚು, ಎರಡು ಗಮ್‍ಟೇಪ್‍ಗಳನ್ನು ವಶಪಡಿಸಿಕೊಂಡಿದೆ.

ಮೊದಲನೇ ಆರೋಪಿಯು ವಿಜಯನಗರ, ಮಲ್ಲೇಶ್ವರಂ, ನಂದಿನಿಲೇಔಟ್, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸುಲಿಗೆ, ದ್ವಿಚಕ್ರ ವಾಹನ ಕಳವು, ಗಾಂಜಾ ಮಾರಾಟ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಎರಡನೆ ಆರೋಪಿಯು ಈ ಹಿಂದೆ ವಿಜಯನಗರ ಪೊಲೀಸ್ ಠಾಣೆಯ ದರೋಡೆಗೆ ಸಂಚು ಪ್ರಕರಣದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಮೂರನೆ ಆರೋಪಿಯು 2016ನೇ ಸಾಲಿನಲ್ಲಿ ಎರಡು ಸುಲಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ.ಆರೋಪಿಗಳ ಬಂಧನದಿಂದ ನಂದಿನಿಲೇಔಟ್ ಪೊಲೀಸ್ ಠಾಣೆಯ ಸುಲಿಗೆ ಪ್ರಕರಣ ಪತ್ತೆಯಾಗಿದೆ.

Facebook Comments