ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ಆಭರಣ ದೋಚಿದ್ದ 10 ಮಂದಿ ಅಂತಾರಾಜ್ಯ ಕಳ್ಳರ ಸೆರೆ

Spread the love

ಬೆಂಗಳೂರು, ಮೇ 21- ಜ್ಯುವೆಲರ್ಸ್ ಅಂಗಡಿಯ ಗೋಡೆ ಕೊರೆದು ಒಳನುಗ್ಗಿ ಸುಮಾರು ಐದು ಕೆಜಿ ಚಿನ್ನದ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಹತ್ತು ಮಂದಿ ಅಂತಾರಾಜ್ಯ ಕುಖ್ಯಾತ ಕಳ್ಳರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿ 55 ಲಕ್ಷ ರೂ. ಮೌಲ್ಯದ 1ಕೆಜಿ 100 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಾರ್ಖಂಡ್ ರಾಜ್ಯದ ಹುಸೈನ್ ಅಲಿಯಾಸ್ ಆದಿಲ್ ಮನರುಲ್ಲಾ ಹಕ್, ಸುಲೇಮಾನ್ ಶೇಖ್, ಅಜಿಜುರ್ ರೆಹಮಾನ್, ರಮೇಶ್ ಬಿಷ್ಠ ಅಲಿಯಾಸ್ ರಾಜು ಬಿಷ್ಠ ಅಲಿಯಾಸ್ ನೇಪಾಲಿ ರಾಜು, ಸದ್ದಾಂ, ಮನರುಲ್ ಶೇಖ್, ಸೈಫುದ್ದೀನ್‍ಶೇಖ್, ಸಲೀಂ ಶೇಖ್ ಹಾಗೂ ಮತ್ತೊಬ್ಬ ಮಹಿಳೆ ಶೈನೂರ್ ಬೇಬಿ ಬಂಧಿತ ಅಂತರರಾಜ್ಯ ಕುಖ್ಯಾತ ಕಳ್ಳರು.

ಈ ಆರೋಪಿಗಳು ಮೊದಲೇ ಪ್ಲಾನ್ ಮಾಡಿಕೊಂಡು ಚಿನ್ನಾಭರಣಗಳನ್ನು ದೋಚುವ ಸಲುವಾಗಿಯೇ ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್ ಅಂಗಡಿಗೆ ಹೊಂದಿಕೊಂಡಂತಿದ್ದ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಅಂಗಡಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಮಾಲೀಕರು ಎಷ್ಟು ಹೊತ್ತಿಗೆ ಬರುತ್ತಾರೆ, ರಾತ್ರಿ ವೇಳೆ ಎಷ್ಟು ಹೊತ್ತಿಗೆ ಅಂಗಡಿ ಮುಚ್ಚುತ್ತಾರೆ ಎಂಬುದನ್ನು ಗಮನಿಸಿದ್ದಾರೆ.

ನಂತರ ಯಾವ ಭಾಗದಲ್ಲಿ ಗೋಡೆ ಕೊರೆದರೆ ಒಳನುಸುಳಲು ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಸ್ಕೆಚ್ ಹಾಕಿದ್ದಾರೆ. ಏ.17ರಂದು ರಾತ್ರಿ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಚಿನ್ನದ ಆಭರಣಗಳನ್ನು ಕಬ್ಬಿಣದ ಲಾಕರ್‍ನಲ್ಲಿಟ್ಟು ನಂತರ ಅಂಗಡಿಗೆ ಬೀಗ ಹಾಕಿಕೊಂಡು ಹೋಗಿರುತ್ತಾರೆ.

ಅಂದು ತಡರಾತ್ರಿ ಆರೋಪಿಗಳು ಎರಡನೇ ಮಹಡಿಯಿಂದ ಜ್ಯುವೆಲ್ಸ್ ಅಂಗಡಿ ಗೋಡೆ ಕೊರೆದು ಒಳನುಗ್ಗಿ ಕಬ್ಬಿಣದ ಲಾಕರನ್ನು ಗ್ಯಾಸ್ ಕಟರ್‍ನಿಂದ ಕತ್ತರಿಸಿ 2.5 ಕೋಟಿ ರೂ. ಮೌಲ್ಯದ ಸುಮಾರು 5 ಕೆಜಿ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಏ.18ರಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಜ್ಯುವೆಲರಿ ಮಾಲೀಕರು ಬಂದು ಅಂಗಡಿ ಬಾಗಿಲು ತೆರೆದು ಬೆಳಗ್ಗೆ ಹೋಗಿ ನೋಡಿದಾಗ ಎಲ್ಲಾ ಚಿನ್ನದ ಬಾಕ್ಸ್‍ಗಳು ಚೆಲ್ಲಾಪಿಲ್ಲಿಯಾಗಿ ಖಾಲಿಯಾಗಿ ಬಿದ್ದಿರುವುದನ್ನು ಕಂಡು ಅಂಗಡಿಯನ್ನು ಗಮನಿಸಿದಾಗ 2ನೇ ಮಹಡಿಯ ಗೋಡೆ ಕೊರೆದು ಕಳ್ಳತನ ಮಾಡಿರುವುದು ಕಂಡು ಬಂದಿದೆ.

ತಕ್ಷಣ ಈ ಬಗ್ಗೆ ಮಾಲೀಕರು ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು 8 ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಪತ್ತೆಹಚ್ಚಿ 10 ಮಂದಿಯನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ನೇತೃತ್ವದಲ್ಲಿ ಜಯನಗರ ಉಪ ವಿಭಾಗದ ಎಸಿಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಕೆ.ಜಿ.ನಗರ ಠಾಣೆ ಇನ್ಸ್‍ಪೆಕ್ಟರ್ ರಕ್ಷಿತ್, ಸುಬ್ರಹ್ಮಣ್ಯಪುರ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಘ್, ಜೆ.ಪಿ.ನಗರ ಠಾಣೆ ಇನ್ಸ್ ಪೆಕ್ಟರ್ ರಾಧಾಕೃಷ್ಣ, ಜಯನಗರ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ 8 ತಂಡಗಳು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ಪೊಲೀಸರ ಉತ್ತಮ ಕಾರ್ಯಾವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Facebook Comments