ಕೆಲಸಕ್ಕಿದ್ದ ಜ್ಯುವೆಲರಿ ಅಂಗಡಿಯನ್ನೇ ದೋಚಿದ್ದ ಸೇಲ್ಸ್ ಮ್ಯಾನ್ ಸೇರಿ ಇಬ್ಬರ ಸೆರೆ

Social Share

ಬೆಂಗಳೂರು,ಜು.18- ಕೆಲಸ ಮಾಡಿಕೊಂಡಿದ್ದ ಜ್ಯುವೆಲರಿ ಅಂಗಡಿಯಲ್ಲೇ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಸೇಲ್ಸ್‍ಮ್ಯಾನ್ ಸೇರಿದಂತೆ ಇಬ್ಬರನ್ನು ಯಶವಂತಪುರ ಠಾಣೆಪೊಲೀಸರು ಬಂಧಿಸಿ 26.25 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕಾರು, ಬೈಕ್ ವಶಪಡಿಸಿಕೊಂಡಿದ್ದಾರೆ.

ಚೇತನ್ ನಾಯಕ್ ಮತ್ತು ಈತನ ಸ್ನೇಹಿತ ವಿಜಯ್ ಬಂಧಿತ ಆರೋಪಿಗಳು. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ 1ನೇ ಮುಖ್ಯರಸ್ತೆಯಲ್ಲಿ ದಿ ಬೆಸ್ಟ್ ಜ್ಯುವೆಲರಿ ಎಂಬ ಅಂಗಡಿ ಇದೆ. ಈ ಅಂಗಡಿಯಲ್ಲಿ ಚೇತನ್ ನಾಯಕ್ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದನು.

ಗ್ರಾಹಕರೊಬ್ಬರು ಚಿನ್ನದ ಸರವನ್ನು ಆರ್ಡರ್ ಕೊಟ್ಟಿದ್ದರು. ಅದರಂತೆ ಸರವನ್ನು ಡಿಸ್ ಪ್ಲೇ ಬೋರ್ಡ್‍ನಲ್ಲಿಟ್ಟಿದ್ದರು. ಗ್ರಾಹಕರು ಆ ಸರವನ್ನು ಪಡೆದುಕೊಳ್ಳಲು ಬಂದಾಗ ಮಾಲೀಕರು ಸರ ಹುಡುಕಾಡಿದಾಗ ಚಿನ್ನದ ಸರ ಸಿಗಲಿಲ್ಲ. ಎಲ್ಲ ಕಡೆ ಹುಡುಕಾಡಿ ನಂತರ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದ ನೌಕರ ಚೇತನ್ ನಾಯಕ್ ತೆಗೆದುಕೊಂಡಿರುವುದು ಕಂಡುಬಂದಿದೆ. ತದನಂತರ ಮಾಲೀಕರು ಅಂಗಡಿಯ ಸ್ಟಾಕ್ ಪರಿಶೀಲನೆ ಮಾಡಿದಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಕಂಡುಬಂದಿದೆ. ತಕ್ಷಣ ಅವರು ನೌಕರನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಚೇತನ್‍ನಾಯಕ್ ಹಾಗೂ ಆತನ ಸ್ನೇಹಿತ ವಿಜಯ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ 26.25 ಲಕ್ಷ ರೂ. ಬೆಲೆಯ 372.9 ಗ್ರಾಂ ತೂಕದ ಚಿನ್ನಾಭರಣ, 99 ಸಾವಿರ ಹಣ ಹಾಗೂ ಕಳವು ಮಾಡಿದ್ದ ಆಭರಣಗಳನ್ನು ವಿಲೇವಾರಿ ಮಾಡಿ ಬಂದ ಹಣದಿಂದ ಖರೀದಿಸಿದ್ದ ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಚೇತನ್ ನಾಯಕ್ ದಿ ಬೆಸ್ಟ್ ಜ್ಯುವೆಲರಿ ಅಂಗಡಿಯಲ್ಲಿ ಸುಮಾರು 4 ವರ್ಷಗಳಿಂದ ಸೇಲ್ಸ್‍ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ಮಾಲೀಕರಿಗೆ ಗೊತ್ತಾಗದಂತೆ ಕಳೆದೊಂದು ವರ್ಷದಿಂದ ಒಂದೊಂದೇ ಚಿನ್ನದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿ ಸ್ನೇಹಿತ ವಿಜಯ್‍ಗೆ ನೀಡುತ್ತಿದ್ದನು. ವಿಜಯ್ ತನ್ನ ಹೆಸರಿನಲ್ಲಿ ಗಿರವಿ ಇಟ್ಟು ಬಂದ ಹಣವನ್ನು ಇಬ್ಬರು ಹಂಚಿಕೊಳ್ಳುತ್ತಿದದ್ದು, ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸುರೇಶ್ ಅವರ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಸಿ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article