ಬೆಂಗಳೂರು,ಫೆ.23- ಜ್ಯುವೆಲರಿ ಅಂಗಡಿ ಬಾಗಿಲು ಮೀಟಿ ಒಳನುಗ್ಗಿ ಮಲಗಿದ್ದ ಕೆಲಸಗಾರರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಂಡು ಅಂಗಡಿಯಲ್ಲಿದ್ದ ಬೆಳ್ಳಿ ಸಾಮಾನುಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಐದು ಮಂದಿ ದರೋಡೆಕೋರರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 3.77 ಲಕ್ಷ ರೂ. ಬೆಲೆ ಬಾಳುವ 60 ಗ್ರಾಂ ತೂಕದ 2 ಚಿನ್ನದ ಸರಗಳು, ಒಂದು ಕೆಜಿ 80 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, 25 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಚಿಕ್ಕಪೇಟೆಯಲ್ಲಿರುವ ಜುವೆಲರಿ ಅಂಗಡಿಯ ಮೂವರು ಕೆಲಸಗಾರರು ಕಳೆದ ಮೇ 11ರಂದು ರಾತ್ರಿ ಕೆಲಸ ಮುಗಿಸಿ ಅಂಗಡಿಯೊಳಗೆ ಮಲಗಿದ್ದರು. ಬೆಳಗಿನಜಾವ 3.30ರ ಸುಮಾರಿನಲ್ಲಿ ಐದು ಮಂದಿ ದರೋಡೆಕೋರರು ಅಂಗಡಿಯ ಬಾಗಿಲನ್ನು ಮೀಟಿ ಒಳನುಗ್ಗಿದ್ದಾರೆ.
ಆ ಸಂದರ್ಭದಲ್ಲಿ ಕೆಲಸಗಾರರಿಗೆ ಎಚ್ಚರವಾಗಿದೆ. ದರೋಡೆಕೋರರು ಏಕಾಏಕಿ ಕಬ್ಬಿಣದ ಲಾಂಗ್ ತೋರಿಸಿ ಹೆದರಿಸಿ ಹಲ್ಲೆ ಮಾಡಿ ಕೆಲಸಗಾರರ ಕತ್ತಿನಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಸರ, ಅಂಗಡಿಯಲ್ಲಿದ್ದ 1 ಕೆಜಿ ಬೆಳ್ಳಿ ಸಾಮಾನುಗಳನ್ನು ದೋಚಿಕೊಂಡು ನಂತರ ಮೊಬೈಲ್‍ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ರಾಬರಿ, ರತ್ರಿ ಕನ್ನಕಳವು ಮತ್ತು ಸಾಮಾನ್ಯ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 3,77,500 ರೂ. ಬೆಲೆ ಬಾಳುವ ಚಿನ್ನದ ಸರ, ಬೆಳ್ಳಿ ಸಾಮಾನುಗಳು ಹಾಗೂ 25 ಸಾವಿರ ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
