‘ಜನತಾ ಜಲಧಾರೆ’ ಕಾರ್ಯಕ್ರಮ ಮುಂದೂಡಿದ ಜೆಡಿಎಸ್

Social Share

ಬೆಂಗಳೂರು, ಜ.18-ರಾಜ್ಯಾದ್ಯಂತ ಪವಿತ್ರ ಜಲ ಸಂಗ್ರಹಿಸುವ ವಿಶೇಷ ಕಾರ್ಯಕ್ರಮ ಜನತಾ ಜಲಧಾರೆ ಮುಂದೂಡಿಕೆಯಾಗಲಿದೆ. ಗಣರಾಜ್ಯೋತ್ಸವ ದಿನವಾದ ಜ.26ರಂದು ಜನತಾ ಜಲಧಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಜೆಡಿಎಸ್ ಉದ್ದೇಶಿಸಿತ್ತು. ಆದರೆ, ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ಕೋವಿಡ್‍ನಿಂದಾಗಿ ಉದ್ದೇಶಿತ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ.
ಫೆಬ್ರವರಿ ಅಂತ್ಯದವರೆಗೂ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗುವ ಸಾಧ್ಯತೆ ವಿರಳ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಲು ನಿರ್ಣಯಿಸಿದ್ದಾರೆ.
ಜನತಾ ಜಲಧಾರೆಗಾಗಿ ಗಂಗಾರಥವನ್ನು ಸಿದ್ಧಗೊಳಿಸಲಾಗಿತ್ತು. ನಾಡಿನ ಜೀವನದಿಗಳಿಂದ ಗಂಗಾಜಲವನ್ನು ತಂದು ಪೂಜಿಸುವ ಸಂಕಲ್ಪ ಮಾಡಲಾಗಿತ್ತು. ರಾಜ್ಯದ ಎಲ್ಲ ಭಾಗಗಳಿಗೂ ನೀರು ಒದಗಿಸುವ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿಮಾಡುವ ಮಹಾಸಂಕಲ್ಪದೊಂದಿಗೆ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು.
ರಾಜ್ಯದ 15 ದಿಕ್ಕುಗಳಿಂದ 51 ಸ್ಥಳಗಳಲ್ಲಿ ಗಂಗಾಜಲವನ್ನು ಗಂಗಾರಥಗಳ ಮೂಲಕ ತಂದು ಬೆಂಗಳೂರಿನಲ್ಲಿ ಪೂಜಿಸುವ ಉದ್ದೇಶವಿತ್ತು. ಜೀವನದಿಗಳಾದ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರಾ, ತುಂಗಭದ್ರಾ, ಶರಾವತಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ ಮೊದಲಾದ ನದಿಗಳಿಂದ ಜಲ ಸಂಗ್ರಹಿಸಿ ಗಂಗಾಪೂಜೆ ಮತ್ತು ಗಂಗಾರತಿ ಮಾಡುವ ಉದ್ದೇಶ ಹೊಂದಲಾಗಿತ್ತು.
ವರ್ಷವಿಡೀ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್ ಹೆಚ್ಚಳವಾದರೆ ಕಾರ್ಯಕ್ರಮವನ್ನು ಮುಂದೂಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ ದಿನವೇ ಪ್ರಕಟಿಸಿದ್ದರು.

Articles You Might Like

Share This Article