ರಾಂಚಿ,ಆ.27- ಅನರ್ಹತೆಯ ವದಂತಿಗಳ ನಡುವೆ ಜಾರ್ಖಂಡ್‍ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮ ಪಕ್ಷದ ಶಾಸಕರ ಜೊತೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಕಲ್ಲಿದ್ದಲ ಗಣಿ ಹಗರಣಕ್ಕೆ ಸಂಬಂಧಪಟ್ಟಂತೆ 2021ರ ಫೆಬ್ರವರಿಯಲ್ಲಿ ಬಿಜೆಪಿ ಹೇಮಂತ್ ಸೊರೇನ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿತ್ತು.
ಗಣಿ ಭೋಗ್ಯ ನೀಡುವಲ್ಲಿ ಅಕ್ರಮಗಳು ನಡೆದಿವೆ. ಗಣಿ ಖಾತೆ ಹೊಂದಿರುವ ಹೇಮಂತ್ ಸೊರೇನ್ ಅವರನ್ನು ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 9 ಎಯಡಿ ಅನರ್ಹಗೊಳಿಸಬೇಕೆಂದು ಮನವಿ ಮಾಡಲಾಗಿತ್ತು. ಬಿಜೆಪಿ ದೂರನ್ನು ರಾಜ್ಯಪಾಲರು ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಆಯೋಗ ಹೇಮಂತ್ ಸೊರೇನ್ ಅವರನ್ನು ವಿಚಾರಣೆ ನಡೆಸಿದ್ದು, ಅಕ್ರಮ ನಡೆದಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದು, ಸೊರೇನ್ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿವೆ ಎನ್ನಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿನ್ನೆ ಸೊರೇನ್ ಅವರು ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ಸಭೆ ನಡೆಸಿದರು. ಚುನಾವಣಾ ಆಯೋಗ ಶಿಫಾರಸ್ಸು ಮಾಡಿರುವ ಬಗ್ಗೆ ಮಾಧ್ಯಮಗಳಿಂದಷ್ಟೇ ಮಾಹಿತಿ ತಿಳಿದಿದೆ. ಆಯೋಗದಿಂದಾಗಲಿ ಅಥವಾ ರಾಜ್ಯಪಾಲರ ಕಚೇರಿಯಿಂದಾಗಲಿ ಅಧಿಕೃತವಾದ ಸೂಚನೆ ರವಾನೆಯಾಗಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸೊರೇನ್, ಪ್ರಸ್ತುತ ನಡೆಯುತ್ತಿರುವ ಸಂಘರ್ಷದಿಂದ ಬುಡಕಟ್ಟು ಸಮುದಾಯದಿಂದ ಬಂದ ನನಗೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಗಿರಿಜನರ ಮಗ. ಯಾವುದೇ ತಂತ್ರಗಳಿಂದ ಅವರು ನನ್ನ ಹಾದಿಯನ್ನು ತಡೆಯಲು ಸಾಧ್ಯವಿಲ್ಲ ಮತ್ತು ಎದುರಿಸಲು ಆಗುವುದಿಲ್ಲ ನನ್ನನ್ನು ಭಯಗೊಳಿಸುವ ಪ್ರಯತ್ನದಿಂದ ವಿರೋಧಿಗಳು ಹಿಂದೆ ಸರಿಯಬೇಕು. ನಮ್ಮ ಆದಿವಾಸಿಗಳ ಡಿಎನ್‍ಎನಲ್ಲಿ ಭಯ ಎಂಬುದಕ್ಕೆ ಜಾಗವೇ ಇಲ್ಲ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ 30 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 18, ಆರ್‍ಜೆಡಿ ಒಬ್ಬ ಶಾಸಕರನ್ನು ಹೊಂದಿದೆ. ಪ್ರತಿಪಕ್ಷ ಬಿಜೆಪಿ 25 ಶಾಸಕರನ್ನು ಹೊಂದಿದೆ. 81 ಸಂಖ್ಯಾಬಲದ ವಿಧಾನಸಭೆಯಲ್ಲಿ ಸರ್ಕಾರ ಸದ್ಯದ ಪರಿಸ್ಥಿತಿಯಲ್ಲಿ ಸುಭದ್ರ ಬಹುಮತವನ್ನು ಹೊಂದಿದೆ. ಬಿಜೆಪಿ ದುರದ್ದೇಶಪೂರ್ವಕವಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸಿದೆ. ಜನಾದೇಶವನ್ನು ಅವಮಾನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸರ್ಕಾರ ರಚನೆಯಾದ ದಿನದಿಂದಲೂ ಅಸ್ಥಿರತೆಗಾಗಿ ನಿರಂತರ ಪ್ರಯತ್ನಗಳು ನಡೆದಿವೆ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದು ಬೇಡ ಜೆಎಂಎಂ ಯಾವುದೇ ನಿರ್ಧಾರ ಕೈಗೊಂಡರೂ ಮಿತ್ರಪಕ್ಷವಾಗಿ ಅದರ ಜೊತೆ ನಿಲ್ಲುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಬನ್ನಗುಪ್ತ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಶಿಫಾರಸ್ಸು ಏನೇ ಇರಲಿ, ರಾಜ್ಯಪಾಲರು ಏನೇ ನಿರ್ಧಾರ ತೆಗೆದುಕೊಳ್ಳಲಿ ಮಿತ್ರ ಪಕ್ಷ ಜೆಎಂಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದಿದ್ದಾರೆ.