ಕಾಂಗ್ರೆಸ್ ಶಾಸಕರ ವಿರುದ್ಧದ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

Social Share

ರಾಂಚಿ. ಅ.,15 -ಕಳೆದ ಜುಲೈನಲ್ಲಿ ಅಕ್ರಮವಾಗಿ ಹಣ ಸಾಗಾಟ ವೇಳೆ ಕೋಲ್ಕತ್ತಾದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಕಾಂಗ್ರೆಸ್ ಶಾಸಕರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ಜಾರ್ಖಂಡ್ ಹೈಕೋರ್ಟ್ ನಿರಾಕರಿಸಿದೆ.

ಸುಮಾರು 48 ಲಕ್ಷ ರೂಪಾಯಿ ಮೊತ್ತದ ನಗದು ವಂಚನೆ ಆರೋಪ ಹೊತ್ತಿರುವ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ವಿಕ್ಸಲ್ ಕೊಂಗರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ದ್ವಿವೇದಿ ಅವರ ಹೈಕೋಟ್‍ನ ಏಕ ಸದಸ್ಯ ನ್ಯಾಯ ಪೀಠದ ತನಿಖೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಆದರೆ, ನ್ಯಾಯಾಲಯದ ಆದೇಶ ಬರುವವರೆಗೆ ಪ್ರಕರಣದ ಆರೋಪಪಟ್ಟಿ ಸಲ್ಲಿಸುವಂತಿಲ್ಲ ಎಂದು ನಿರ್ದೇಶನ ನೀಡಿದೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾರೀ ಪ್ರಮಾಣದ ನಗದು ಹಣದೊಂದಿಗೆ ಸಿಕ್ಕಿಬಿದ್ದ ಆರೋಪದ ಮೇಲೆ ಜಾರ್ಖಂಡ್‍ನ ಮೂವರು ಶಾಸಕರನ್ನು ಕಾಂಗ್ರೆಸ್ ಜುಲೈನಲ್ಲಿ ಅಮಾನತುಗೊಳಿಸಿತ್ತು ಮತ್ತು ರಾಜ್ಯದಲ್ಲಿ ಬಿಜೆಪಿ ತನ್ನ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರು ಶಾಸಕರು ಪ್ರಯಾಣಿಸುತ್ತಿದ್ದ ಕ್ರೀಡಾ ಬಳಕೆಯ ವಾಹನವನ್ನು ತಡೆದಿದ್ದು, ಕಾರಿನಲ್ಲಿ ಸುಮಾರು 50 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ಕಾಂಗ್ರೆಸ್ ಶಾಸಕ ಅನುಪ್ ಸಿಂಗ್ ಅವರು ಅರ್ಗೋರಾ ಪೊಲೀಸ್ ಠಾಣೆಯಲ್ಲಿ ಮೂವರು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅದನ್ನು ಕೋಲ್ಕತ್ತಾಗೆ ವರ್ಗಾಯಿಸಲಾಗಿದೆ.

ರಾಂಚಿಯಿಂದ ಕೋಲ್ಕತ್ತಾಗೆ ಎಫ್‍ಐಆರ್ ವರ್ಗಾವಣೆಯನ್ನು ಪ್ರಶ್ನಿಸಿ ಮೂವರು ಶಾಸಕರು ಜಾರ್ಖಂಡ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ನವೆಂಬರ್ 10 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ

Articles You Might Like

Share This Article