ಜೇಮ್‍ಸೇಡ್ಪುರ್, ಜು. 22- ಜಾರ್ಖಂಡ್‍ನ ಪೂರ್ವ ಸಿಂಗಬೂಮ್ ಜಿಲ್ಲೆಯಲ್ಲಿ ಹೃದಾಯಕವಿದ್ರಾಹಕ ಘಟನೆಯೊಂದು ನಡೆದಿದ್ದು ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್, ಆಕೆಯ ತಾಯಿ ಹಾಗೂ ಮಗಳ ದೇಹಗಳು ಕೊಳೆತ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ಮೃತಪಟ್ಟ ಮಹಿಳಾ ಕಾನ್ಸ್‍ಟೇಬಲ್ ಅನ್ನು ಸಬಿತಾ ಹೆಂಬ್ರಾಮ್ (36), ಆಕೆಯ ಪುತ್ರಿ (13) ಹಾಗೂ ತಾಯಿ (60) ಎಂದು ಗುರುತಿಸಲಾಗಿದೆ. ಸಬಿತಾ ಗೋಲ್ಮೌರಿ ಪ್ರದೇಶದ ಮನೆಯೊಂದರಲ್ಲಿ ವಾಸಿಸುತ್ತಿದ್ದು ಇತ್ತೀಚೆಗೆ ಹಿರಿಯ ಸೂಪರಿಂಟೆಂಡೆಂಟ್ ಕಚೇರಿಗೆ ವರ್ಗಾವಣೆ ಆಗಿದ್ದರೂ, ಕಳೆದ 2 ದಿನಗಳ ಹಿಂದೆಯೇ ಮಹಿಳಾ ಕಾನ್ಸ್‍ಟೇಬಲ್ ಆಗಿ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತಾದರೂ ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ.
ಇಂದು ಬೆಳಗ್ಗೆ ಸಬಿತಾ ಅವರು ವಾಸಿಸುತ್ತಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಎಸ್‍ಎಸ್‍ಪಿ ಪ್ರಭಾತ್ ಕುಮಾರ್ ಅವರು ಸಬಿತಾರ ಮನೆ ಪ್ರವೇಶಿಸಿದಾಗ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮಹಿಳಾ ಕಾನ್ಸ್‍ಟೇಬಲ್ ಸಬಿತಾರ ಕೊಲೆಗೆ ಏನು ಕಾರಣ? ಅವರ ಸಾವು ಆಕಸ್ಮಿಕವೇ? ಅಥವಾ ಯಾರಾದರೂ ಕೊಲೆ ಮಾಡಿದ್ದಾರೆಯೇ ಎಂಬ ನಾನಾ ಕೋನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ ಎಂದು ಪ್ರಭಾತ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.