ನಮಗೆ ಯಾರೂ ಹಣ ಕೊಟ್ಟಿಲ್ಲ, ಅವರು ಹೇಳುವುದೆಲ್ಲ ಶುದ್ಧ ಸುಳ್ಳು : ಚಂದ್ರು ಅಜ್ಜಿ

ಬೆಂಗಳೂರು, ಏ.10- ಇಲ್ಲ ಸ್ವಾಮಿ, ನಾವು ಯಾರಿಂದಲೂ ಯಾವ ಹಣವನ್ನೂ ಪಡೆದಿಲ್ಲ. ಅವರು ಹೇಳುವುದೆಲ್ಲ ಶುದ್ಧ ಸುಳ್ಳು. ಅವರಿಗೆ ಧೈರ್ಯ ಇದ್ದರೆ ನಮ್ಮೆದುರಿಗೆ ಬಂದು ಹೇಳಲಿ. ನಾವು ಉತ್ತರ ಕೊಡುತ್ತೇವೆ ಎಂದು ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ಯೆಯಾದ ಚಂದ್ರು ಅಜ್ಜಿ ಮಾರಿಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರು ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಿನ್ನೆ ಶಾಸಕ ಜಮೀರ್ ಅಹಮ್ಮದ್ ಅವರು, ಸೈಮನ್‍ರಾಜ್ 5 ಲಕ್ಷ ಕೊಟ್ಟು ಬಿಜೆಪಿಯವರು ಸುಳ್ಳು ಹೇಳಿಸಿದ್ದಾರೆ. ಎಫ್‍ಐಆರ್‍ನಲ್ಲಿ ಏಕೆ ಉರ್ದು ವಿಚಾರ ಹೇಳಿರಲಿಲ್ಲ. ಹಣ ಪಡೆದು ಯಾವ ರೀತಿ ಹೇಳಿಕೆ ನೀಡಿದ್ದಾನೆಂಬುದು ನನಗೆ ಗೊತ್ತಿದೆ. ಎಫ್‍ಐಆರ್ ದಾಖಲಾದ ಸಂದರ್ಭದಲ್ಲಿ ನೀಡಿದ ಹೇಳಿಕೆ ಏನು, ನಂತರ ನೀಡಿದ ಹೇಳಿಕೆ ಯಾವ ರೀತಿ ಇದೆ ಎಂಬುದರಲ್ಲೇ ಅರ್ಥವಾಗುತ್ತದೆ ಎಂದು ಹೇಳಿದ್ದರು.

ಈ ವಿಷಯ ಈಗ ಚಂದ್ರು ಕುಟುಂಬಸ್ಥರನ್ನು ಕೆರಳಿಸಿದ್ದು, ಇಂದು ಅವರ ಅಜ್ಜಿ ಹಾಗೂ ಸಹೋದರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಯಾವುದೇ ಹಣ ಪಡೆದಿಲ್ಲ. ಅದು ಶುದ್ಧ ಸುಳ್ಳು. ಅವರು ಅವರ ಜಾತಿಯವರನ್ನು ಬಚಾವ್ ಮಾಡಿಕೊಳ್ಳಲು ಆ ರೀತಿ ಹೇಳಿದ್ದಾರೆ. ನಮ್ಮ ನೋವು ನಮಗಾಗಿದೆ. ಪ್ರತಿದಿನ ಸ್ಟೇಷನ್‍ಗೆ ಹೋಗಿ ಬರುತ್ತಿದ್ದೇವೆ. ಸ್ಟೇಷನ್ ಒಳಗೆ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಯಾವ ಹಣವನ್ನು ಯಾರಿಂದಲೂ ನಾವು ಪಡೆದಿಲ್ಲ ಎಂದು ಅವರು ನೊಂದು ಹೇಳಿದರು.

ಉರ್ದುವಿನಲ್ಲಿ ಮಾತನಾಡದಿದ್ದಕ್ಕೆ ಮುಸ್ಲಿಂ ಯುವಕರೊಂದಿಗೆ ಜಗಳವಾಗಿದೆ. ನಮ್ಮವರು ಸಿಸಿಟಿವಿ ನೋಡಿದ ಮೇಲೆ ಗೊತ್ತಾಗಿದೆ. ಅಂಗಡಿಗೆ ಹೋದಾಗ ಗಾಡಿ ಕೂಡ ಟಚ್ ಆಗಿಲ್ಲ. ನಮ್ಮ ಮಗನನ್ನು ಕಳೆದುಕೊಂಡು ನಮಗೆ ಹೊಟ್ಟೆ ಉರಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಸೈಮನ್‍ಗೆ ದುಡ್ಡು ಕೊಟ್ಟಿರುವುದನ್ನು ಶಾಸಕ ಜಮೀರ್ ಸಾಬೀತು ಪಡಿಸಲಿ. ಅವರ ಸಮುದಾಯದ ಆರೋಪಿಗಳನ್ನು ಹೊರಗೆ ತರಲು ಅವರ ಪರ ವಹಿಸಿ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಬಡವರು, ಏನೂ ಮಾಡಲಾಗುವುದಿಲ್ಲ ಎಂದು ಅವರು ತಿಳಿದಿದ್ದಾರೆ ಎಂದರು.

ಚಂದ್ರು ಸಹೋದರ ಮಾತನಾಡಿ, ನಾವು ಯಾರಿಂದಲೂ ಒಂದು ಪೈಸೆಯನ್ನೂ ಪಡೆದಿಲ್ಲ. ಯಾರೂ ಬಂದು ನಮಗೆ ಹಣ ಕೊಟ್ಟಿಲ್ಲ. ಆರೋಪಿಗಳು ಬೇಕಂತಲೇ ಗಲಾಟೆ ತೆಗೆದು ಚಂದ್ರುವಿಗೆ ಚುಚ್ಚಿ ಸಾಯಿಸಿದ್ದಾರೆ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.