ಬೈಕ್ ತಾಗಿದಕ್ಕೆ ಜಗಳ ಚಂದ್ರು ಕೊಲೆ: ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

ಬೆಂಗಳೂರು,ಏ.6- ಬೈಕ್ ತಾಗಿದ ವಿಚಾರದಲ್ಲಿ ನಡೆದ ಜಗಳದ ವೇಳೆ ನಿನ್ನೆ ಮುಂಜಾನೆ ಚಂದ್ರು ಎಂಬ ಯುವಕನ ಕೊಲೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮುಂಜಾನೆ ಮೈಸೂರು ರಸ್ತೆಯಲ್ಲಿ ಸೈಮನ್‍ರಾಜ್ ಮತ್ತು ಚಂದ್ರು ಬೈಕ್‍ನಲ್ಲಿ ಊಟಕ್ಕೆ ತೆರಳುತ್ತಿದ್ದಾಗ ಇವರ ಬೈಕ್ ಶಾಹಿದ್ ಎಂಬಾತನ ಬೈಕ್‍ಗೆ ತಾಗಿದ ಪರಿಣಾಮ ಗಲಾಟೆಯಾಗಿದೆ.

ಆ ಸಂದರ್ಭದಲ್ಲಿ ಇತರರು ಸೇರಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಚಂದ್ರುವಿನ ಬಲತೊಡೆಗೆ ಶಾಹಿದ್ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಇರಿತದಿಂದ ಗಂಭೀರ ಗಾಯಗೊಂಡಿದ್ದ ಚಂದ್ರುನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಸಿ ತನಿಖೆ ಮುಂದುವರೆಸಿದ್ದೇವೆ ಎಂದರು. ಭಾಷೆ ವಿಚಾರದಲ್ಲಿ ಈ ಕೊಲೆ ನಡೆದಿದೆಯೇ ಎಂಬುದಕ್ಕೆ ಉತ್ತರಿಸಲು ಆಯುಕ್ತರು ನಿರಾಕರಿಸಿದರು.