ಜಮ್ಮು, ಜ.4- ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಜಮ್ಮು-ಕಾಶ್ಮೀರದ ಪೊಲೀಸರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮತ್ತಷ್ಟು ಶಕ್ತಿಶಾಲಿಗಳಾಗಲಿದ್ದಾರೆ. ಅಮೆರಿಕ ನಿರ್ಮಿತ ಸಿಗ್‍ಸೌರ್-716 ರೈಫಲ್‍ಗಳು ಮತ್ತು ಎಂಪಿಎಕ್ಸ್-9ಎಂಎಂ ಪಿಸ್ತೂಲ್‍ಗಳನ್ನು ಜಮ್ಮು-ಕಾಶ್ಮೀರದ ಪೊಲೀಸರಿಗಾಗಿ ಖರೀದಿಸಲಾಗುತ್ತಿದೆ.
ಪಾಕಿಸ್ತಾನ ಮತ್ತು ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಅಪಾಯಕಾರಿ ಸನ್ನಿವೇಶಗಳು ಎದುರಾಗುತ್ತಿವೆ. ಉಗ್ರರ ಸುಳುವಿಕೆ, ಗಡಿ ಪ್ರಚೋದನೆಯ ವಿರುದ್ಧ ಸೈನಿಕ ಜತೆ ಪೊಲೀಸರು ಕೂಡ ಹೋರಾಟ ನಡೆಸಬೇಕಿದೆ.
ಗಡಿಯೊಳಗೆ ನುಸುಳುವ ಉಗ್ರರು ಹಲವಾರು ವಿದ್ವಂಸಕ ಕೃತ್ಯಗಳಿಗೂ ಕೈಹಾಕಿ ಆತಂಕ ಮೂಡಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಡಲು ಈಗ ಇರುವ ಶಸ್ತ್ರಾಸ್ತ್ರಗಳ ಬದಲಿಗೆ ಅತ್ಯಾಧುನಿಕವಾದ ಬಂದೂಕು ಮತ್ತು ಪಿಸ್ತೂಲ್‍ಗಳನ್ನು ಸರ್ಕಾರ ಪೂರೈಕೆ ಮಾಡುತ್ತಿದೆ.
ಇದಕ್ಕಾಗಿ ಜಾಗತಿಕ ಬಿಡ್‍ಗಳನ್ನು ಕರೆದಿದ್ದು, ಇ-ಮಾರ್ಕೆಟ್ ಮೂಲಕ ಶಸ್ತ್ರಾಸ್ತ್ರ ಖರೀದಿಸಲಾಗುತ್ತಿದೆ. ಸಿಗ್‍ಸೌರ್-716 ರೈಫಲ್ 7.6್ಡ251 ಮಿಲಿಮೀಟರ್ ಕಾಟ್ರೇಜ್ ಹೊಂದಿದ್ದು, 3.82 ಕೆಜಿ ತೂಕವಿದೆ. ನಿಮಿಷಕ್ಕೆ 650ರಿಂದ 850 ಸುತ್ತು ಗುಂಡು ಹಾರಿಸುವ ಸಾಮಥ್ರ್ಯ ಹೊಂದಿದೆ. 500 ಮೀಟರ್‍ಗಳವರೆಗೂ ಅಂದರೆ ಸರಿ ಸುಮಾರು ಅರ್ಧ ಕಿ.ಮೀ. ದೂರದವರೆಗೂ ಕರಾರುವಕ್ಕಾದ ಗುರಿ ತಲುಪಲಿದೆ. ಈಗಿರುವ ದೇಶೀಯ 5.5್ಡ645 ಮಿಲಿಮೀಟರ್ ಕಾಟ್ರೇಜ್‍ಗಿಂತಲೂ 716 ರೈಫಲ್ ಅತ್ಯಾಧುನಿಕವಾಗಿದೆ.
ಇನ್ನು ಸಿಗ್ ಎಂಪಿಎಕ್ಸ್ -9ಎಎಂ ಪಿಸ್ತೂಲು 2.94 ಕೆಜಿ ತೂಕ ಹೊಂದಿದ್ದು, ನಿಮಿಷಕ್ಕೆ 850 ಸುತ್ತು ಗುಂಡು ಹಾರಿಸುವ ಸಾಮಥ್ರ್ಯ ಹೊಂದಿದೆ. ಎರಡು ಶಸ್ತ್ರಾಸ್ತ್ರಗಳು ಗ್ಯಾಸ್ ಆಧಾರಿತ ಚಾಲನೆ ಪದ್ಧತಿ ಹೊಂದಿವೆ. ಜಮ್ಮು-ಕಾಶ್ಮೀರದ ಪೊಲೀಸರಿಗಾಗಿ 500 ರೈಫಲ್ಸ್, 100 ಪಿಸ್ತೂಲ್‍ಗಳನ್ನು ಖರೀದಿಸಲಾಗುತ್ತಿದೆ.
2019ರಲ್ಲಿ ಭಾರತ ಸರ್ಕಾರ 72400 ರೈಫಲ್‍ಗಳನ್ನು 700 ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. 2017ರಲ್ಲಿ ಭಾರತೀಯ ಸೇನೆಗಾಗಿ ಸುಮಾರು 44ಸಾವಿರ ಲಘು ಮಿನಿಷನ್ ಗನ್, 44,600 ಕಾರ್ಬೈನ್ಸ್ ಬಂದೂಕು ಸೇರಿದಂತೆ ಒಟ್ಟು 7ಲಕ್ಷ ಶಸ್ತ್ರಾಸ್ತ್ರ ಖರೀದಿಗಳಿಗೆ ನಿರ್ಧರಿಸಲಾಗಿತ್ತು. ಇದೇ ಮೊದಲ ಬಾರಿಗೆ ಅತ್ಯಾಧುನಿಕ ಸಿಗ್‍ಸೌರ್ ರೈಫಲ್‍ಗಳನ್ನು ಸೇನೆ ಹೊರತುಪಡಿಸಿ ಪೊಲೀಸರಿಗೆ ನೀಡಲಾಗುತ್ತಿದೆ.
