ಇಂಡೋ-ಫೆಸಿಫಿಕ್ ಸಂಬಂಧ ಸುಧಾರಣೆಗೆ ಮತ್ತಷ್ಟು ಒತ್ತು : ಜಪಾನ್ನಲ್ಲಿ ಮೋದಿ-ಬಿಡನ್ ಭೇಟಿ
ವಾಷಿಂಗ್ಟನ್, ಏ.28- ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ಮುಂದಿನ ತಿಂಗಳು ದಕ್ಷಿಣ ಕೊರಿಯಾ ಮತ್ತು ಜಪಾನ್ಗೆ ತೆರಳಲಿದ್ದು, ಟೋಕಿಯೊದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಬಿಡೆನ್ ಅವರ ದಕ್ಷಿಣ ಕೊರಿಯಾ ಮತ್ತು ಜಪಾನ್ ಪ್ರವಾಸವನ್ನು ಮೇ 20 ರಿಂದ 24 ರವರೆಗೆ ನಿಗದಿಪಡಿಸಲಾಗಿದೆ. ಈ ಪ್ರವಾಸವು ಬಿಡೆನ್-ಹ್ಯಾರಿಸ್ ಆಡಳಿತದ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಇಂಡೋ-ಪೆಸಿಫಿಕ್ ಸಂಬಂಧಗಳು ಬಂಡೆಯಂತೆ ಗಟ್ಟಿಗೊಳಿಸಲಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದ್ದಾರೆ.
ಬಿಡೆನ್ ಅವರು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಮತ್ತು ಜಪಾನ್ನ ಪ್ರಧಾನಿ ಕಿಶಿದಾ ಫುಮಿಯೊ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಪ್ರಮುಖ ಭದ್ರತಾ ಸಂಬಂಧಗಳನ್ನು ಸುಧಾರಿಸಲು, ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು, ಪ್ರಾಯೋಗಿಕ ಫಲಿತಾಂಶಗಳಿಗೆ ಮತ್ತಷ್ಟು ನಿಕಟ ಸಹಕಾರ ಬಯಸಲಿದ್ದಾರೆ. ಟೋಕಿಯೊದಲ್ಲಿ ಅಧ್ಯಕ್ಷ ಬಿಡೆನ್ ಅವರು ಆಸ್ಟ್ರೇಲಿಯಾ, ಜಪಾನ್, ಭಾರತ ಕ್ವಾಡ್ ಗುಂಪಿನ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಪ್ರವಾಸದ ಕುರಿತು ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಾವು ಕುತೂಹಲಿಗಳಾಗಿದ್ದೇವೆ ಎಂದು ಪ್ಸಾಕಿ ಹೇಳಿದ್ದಾರೆ.
ಚೀನಾದ ಬೆಳೆಯುತ್ತಿರುವ ಮಿಲಿಟರಿಯ ಪ್ರಭಾವದ ನಡುವೆ 2017ರ ನವೆಂಬರ್ನಲ್ಲಿ ಅಮೆರಿಕಾ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ಇಂಡೋ-ಪೆಸಿಫಿಕ್ನಲ್ಲಿ ನಿರ್ಣಾಯಕ ಕಾರ್ಯತಂತ್ರಗಳನ್ನು ಅನುಸರಿಸಲಾರಂಭಿಸಿವೆ. ಸಮುದ್ರ ಮಾರ್ಗಗಳನ್ನು ಯಾವುದೇ ಪ್ರಭಾವದ ಒತ್ತಡಕ್ಕೆ ಸಿಲುಕದಂತೆ ಕಾಪಾಡಿ, ಮುಕ್ತವಾಗಿಡುವುದು ಈ ಮೂಲಕ ದೀರ್ಘಾವ ಕಾರ್ಯತಂತ್ರ ಅನುಸರಿಸಲು ಮುಂದಾಗಿವೆ.
ಚೀನಾ ತೈವಾನ್, ಫಿಲಿಪೈನ್ಸ್, ಬ್ರೂನಿ, ಮಲೇಷ್ಯಾ ಮತ್ತು ವಿಯೆಟ್ನಾಂ ಎಲ್ಲಾ ವಿವಾದಿತ ಪ್ರದೇಶಗಳ ಮೇಲೆ ಹಕ್ಕು ಸಾಧಿಸುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಬೀಜಿಂಗ್ ಕೇಂದ್ರಾಡಳಿತ ಕೃತಕ ದ್ವೀಪಗಳು ಮತ್ತು ಮಿಲಿಟರಿ ನೆಲೆಗಳನ್ನು ಸ್ಥಾಪನೆ ಮಾಡಿದೆ. ಪೂರ್ವ ಚೀನಾ ಸಮುದ್ರದ ಬಗ್ಗೆ ಜಪಾನ್ನೊಂದಿಗೆ ಕಡಲ ವಿವಾದವೂ ಸೃಷ್ಟಿಯಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವಾಷಿಂಗ್ಟನ್ನಲ್ಲಿ ಅಮೆರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡನ್ ಆಯೋಜಿಸಿದ್ದ ಮೊದಲ ಭೌತಿಕ ಶೃಂಗಸಭೆಯಲ್ಲಿ ಕ್ವಾಡ್ ನಾಯಕರು ಇಂಡೋ-ಪೆಸಿಫಿಕ್ ಅನ್ನು ಮುಕ್ತವಾಗಿಡುವ ವಾಗ್ದಾನ ಮಾಡಿದ್ದರು.