ಮನೆ ಕೆಲಸಕ್ಕೆ ಸೇರಿ ಚಿನ್ನಾಭರಣ ದೋಚಿದ್ದ ಮುಂಬೈನ ಮೂವರು ಕಳ್ಳಿಯರು ಸೆರೆ

Social Share

ಬೆಂಗಳೂರು,ಜು.11-ಫೇಸ್‍ಬುಕ್‍ನ ಪಬ್ಲಿಕ್ ಗ್ರೂಪ್‍ನಲ್ಲಿ ನಕಲಿ ಖಾತೆ ತೆರೆದು ನಕಲಿ ವಿವರಗಳನ್ನು ನೀಡುವ ಮೂಲಕ ಮನೆಕೆಲಸಗಾರರು ಲಭ್ಯವಿದ್ದಾರೆಂಬ ಜಾಹಿರಾತು ನೀಡಿ ನಂತರ ಮನೆಕೆಲಸಕ್ಕೆ ಸೇರಿಕೊಂಡು ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಮುಂಬೈನ ಮೂವರು ಮಹಿಳೆಯರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.


ಮುಂಬೈನ ಪ್ರಿಯಾಂಕ ರಾಜೇಶ್ ಮೊಗ್ರೆ(29), ಮಹಾದೇವಿ(26) ಮತ್ತು ನವೀಮುಂಬೈನ ವನಿತ(37) ಬಂಧಿತ ಮಹಿಳೆಯರು. ಇವರಿಂದ ಬಂಗಾರದ ಒಡವೆಗಳು ಹಾಗೂ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ನಿವಾಸಿ ಸುಬ್ಬಲಕ್ಷ್ಮಿ ಎಂದು ಸುಳ್ಳು ವಿವರಗಳನ್ನು ನೀಡಿ ಅರವಿಂದ ಎಂಬುವರ ಮನೆಯಲ್ಲಿ ಈ ಮಹಿಳೆ ಕೆಲಸಕ್ಕೆ ಸೇರಿಕೊಂಡಿದ್ದಳು.

ಮನೆಕೆಲಸಕ್ಕೆ ಸೇರಿಕೊಂಡ ಕೇವಲ ಮೂರು ದಿನಗಳ ಕಾಲ ಕೆಲಸ ಮಾಡಿ ಅರವಿಂದ ಅವರ ಮನೆಯಲ್ಲಿದ್ದ 250 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 100 ಗ್ರಾಂ ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದಳು.

ಈ ಬಗ್ಗೆ ಅರವಿಂದ್ ಅವರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳಾ ಆರೋಪಿ ಪತ್ತೆಗಾಗಿ ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಭೀಮಾಶಂಕರ್ ಗುಳೇದ್ ಅವರ ಸೂಚನೆಯಂತೆ ಬಾಣಸವಾಡಿ ಉಪವಿಭಾಗದ ಪೊಲೀಸ್ ಆಯುಕ್ತ ನಿಂಗಪ್ಪ .ಬಿ ಸಕ್ರಿ ಅವರ ಮಾರ್ಗದರ್ಶನದಲ್ಲಿ ಹೆಣ್ಣೂರು ಠಾಣೆ ಇನ್‍ಸ್ಪೆಕ್ಟರ್ ವಸಂತಕುಮಾರ್ ನೇತೃತ್ವದ ತಂಡವನ್ನು ರಚನೆ ಮಾಡಲಾಗಿತ್ತು.

ಈ ತಂಡವು ಆರೋಪಿ ಪತ್ತೆಗಾಗಿ ಮೂರು ಬಾರಿ ಮಹಾರಾಷ್ಟ್ರದ ಮುಂಬೈಗೆ ಹೋಗಿ ಬಾತ್ಮಿದಾರರುಗಳನ್ನು ನೇಮಿಸಿಕೊಂಡು ಮಾಹಿತಿ ಸಂಗ್ರಹಿಸಿ ಮೂರು ಮಂದಿ ಮಹಿಳಾ ಆರೋಪಿಗಳನ್ನು ವಶಕ್ಕೆ ಪಡೆದು ಕಳ್ಳತನ ಮಾಡಿದ್ದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೂವರು ಮಹಿಳೆಯರು ಸೇರಿಕೊಂಡು ಫೇಸ್‍ಬುಕ್‍ನಲ್ಲಿ ರೆಫರ್ ಹೌಸ್ ಮೇಡ್ಸ್ , ಬೆಂಗಳೂರು ಎಂಬ ಪಬ್ಲಿಕ್ ಗ್ರೂಪ್‍ನಲ್ಲಿ ನಕಲಿ ಖಾತೆಗಳನ್ನು ತೆರೆದು ನಕಲಿ ವಿವರಗಳನ್ನು ನೀಡುವ ಮೂಲಕ ಸಾರ್ವಜನಿಕರಿಗೆ ಮನೆಕೆಲಸಗಾರರು ಲಭ್ಯವಿದ್ದಾರೆ ಎಂದು ಜಾಹಿರಾತು ನೀಡಿದ್ದಾರೆ.

ಅದರಂತೆ ಮನೆ ಮಾಲೀಕರು ಸಂಪರ್ಕಿಸಿದಾಗ ಆ ಮನೆಗಳಿಗೆ ಹೋಗಿ ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದ ಸಮಯದಲ್ಲಿ ಮನೆಗಳ್ಳತನ ನಡೆಸುವ ಪ್ಲಾನ್ ಮಾಡಿಕೊಂಡು ಅದರಂತೆ ಚಿನ್ನಾಭರಣ ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಫೇಸ್‍ಬುಕ್ ಮೂಲಕವೇ ಸಂಪರ್ಕ: ಈ ಮಹಿಳಾ ಆರೋಪಿಗಳನ್ನು ಪತ್ತೆಹಚ್ಚಲು ಫೇಸ್‍ಬುಕ್ ನಂಬರ್ ಮೂಲಕವೇ ಪೊಲೀಸ್ ತಂಡ ಪತ್ತೆಹಚ್ಚಿ ಮುಂಬೈ ಹಾಗೂ ನವಮುಂಬೈನ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಮೂವರು ಬೆಂಗಳೂರಿಗೆ ಬಂದು ಆರೋಪಿಗಳ ಪೈಕಿ ಮಹಾದೇವಿ ತನ್ನ ಹೆಸರನ್ನು ಸುಬ್ಬಲಕ್ಷ್ಮಿ, ದಕ್ಷಿಣ ಕನ್ನಡ ಜಿಲ್ಲೆ ಎಂದು ಬದಲಾಯಿಸಿಕೊಂಡು ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಫೋನ್‍ನಂಬರ್ ಕೊಟ್ಟು ಮೇ 3ರಂದು ಕೆಲಸಕ್ಕೆ ಸೇರಿ 6ರಂದು ಮನೆ ಮಾಲೀಕರು ಹೊರಗೆ ಹೋದ ಸಮಯ ನೋಡಿಕೊಂಡು ಆಭರಣಗಳನ್ನು ಕಳವು ಮಾಡಿದ್ದಳು.

ಪ್ರಕರಣ ವಿಶೇಷತೆ: ಆರೋಪಿಗಳು ಅರವಿಂದ್ ಅವರಿಗೆ ನೀಡಿದ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಹಾಗೂ ಸಿಸಿ ಕ್ಯಾಮೆರಾ ಫುಟೇಜ್‍ಗಳ ಮಾಹಿತಿ ಆಧಾರದ ಬೆನ್ನತ್ತಿ ಮುಂಬೈಗೆ ಹೋಗಿ ಈ ತಂಡ ವಿಚಾರ ಮಾಡಿದಾಗ ಆರೋಪಿಗಳು ನೀಡಿದ ಮೊಬೈಲ್ ಹಾಗೂ ನಂಬರ್ ಬೇರೊಬ್ಬ ವ್ಯಕ್ತಿಗೆ ಸಂಬಂಧಿಸಿರುವುದು ಗೊತ್ತಾಗಿದೆ.

ಆರೋಪಿಗಳು ಮೊಬೈಲ್‍ನ್ನು ಕೃತ್ಯಕ್ಕೆ ಬಳಸಲೆಂದೆ ಪಿಕ್‍ಪಾಕೆಟ್ ಮಾಡಿರುವುದು ಗೊತ್ತಾಗಿದೆ. ಆರೋಪಿಗಳಿಗಾಗಿ ಸತತ ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ ಮುಂಬೈ ಮತ್ತು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶಗಳಲ್ಲಿರುವ ಲಾಡ್ಜ್ ಮಾಲೀಕರಿಂದ ಮಾಹಿತಿಗಳನ್ನು ಸಂಗ್ರಹಿಸಿ ತಾಂತ್ರಿಕ ದತ್ತಾಂಶಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಮೂವರು ಆರೋಪಿಗಳ ಮೇಲೆ ಮುಂಬೈನಗರದ ವಿವಿಧ ಕಡೆಗಳಲ್ಲಿ ಹಲವಾರು ಮನೆ ಕಳ್ಳತನ ಹಾಗೂ ಇತರೆ ಪ್ರಕರಣಗಳು ದಾಖಲಾಗಿರುತ್ತವೆ ಎಂದು ವಿಚಾರಣೆ ಸಮಯದಲ್ಲಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ. ಆರೋಪಿಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಹಾಗೂ ಅಪರ ಪೊಲೀಸ್ ಆಯುಕ್ತರು, ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.

Articles You Might Like

Share This Article