ಬೆಂಗಳೂರು,ಜ.9- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಹುನಿರೀಕ್ಷಿತ ಜಂಟಿ ಅಧಿವೇಶನ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.ಸಾಮಾನ್ಯವಾಗಿ ವರ್ಷದ ಮೊದಲ ಜಂಟಿ ಅಧಿವೇಶನವನ್ನು ಪ್ರತಿ ವರ್ಷ ಜನವರಿ ತಿಂಗಳ ಮಧ್ಯಭಾಗದಲ್ಲಿ ನಡೆಸುವ ಸಂಪ್ರದಾಯವಿತ್ತು.
ರಾಜ್ಯಪಾಲರು ಅಧಿವೇಶನವನ್ನು ಉದ್ದೇಶಿಸಿ ಸರ್ಕಾರದ ಸಾಧನೆಗಳು ಹಾಗೂ ಆ ವರ್ಷದ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದರು. ಆದರೆ ಕಳೆದ ಎರಡು ವಾರದಿಂದ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಮೂರನೇ ಕೋವಿಡ್ ಅಲೆ ಕಾಣಿಸಿಕೊಂಡಿರುವುದರಿಂದ ಸರ್ಕಾರ ಫೆಬ್ರವರಿ ತಿಂಗಳ 1ನೇ ಇಲ್ಲವೇ 2ನೇ ವಾರದಲ್ಲಿ ಅಧಿವೇಶನವನ್ನು ನಡೆಸಲು ಉದ್ದೇಶಿಸಿದೆ.
ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ನೋಡಿಕೊಂಡು ಶಿಷ್ಟಾಚಾರದಂತೆ ಒಂದು ವಾರ ಇಲ್ಲವೇ ಎರಡು ವಾರಗಳ ಕಾಲ ಮಾತ್ರ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನವರಿ ತಿಂಗಳ ಕೊನೆ ವಾರದಲ್ಲಿ ಜಂಟಿ ಅಧಿವೇಶನ ನಡೆಸಬೇಕೆಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಪುಟದ ಸಹೋದ್ಯೋಗಿಗಳು ವ್ಯಕ್ತಪಡಿಸಿದ್ದಾರೆ.
ಆದರೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪ್ರಸ್ತುತ ಸಂದರ್ಭದಲ್ಲಿ ಜನರು ಗುಂಪುಗೂಡುವುದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುವ ಸಾಧ್ಯತೆ ಇದೆ ಎಂದು ಸಲಹೆ ಮಾಡಿದ್ದರ ಹಿನ್ನೆಲೆಯಲ್ಲಿ ಸರ್ಕಾರ ಫೆಬ್ರವರಿ ತಿಂಗಳ ಸ್ಥಿತಿಗತಿ ನೋಡಿಕೊಂಡು ಅಧಿವೇಶನ ನಡೆಸಲು ಮುಂದಾಗಿದೆ.
ಕಳೆದ ವರ್ಷ ಡಿಸೆಂಬರ್ 24 ರಂದು ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಗಿದ ನಂತರ, ಬಜೆಟ್ ಪೂರ್ವ ಅವೇಶನವನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಲು ಸರ್ಕಾರ ಮುಂದಾಗಿತ್ತು. ಆದರೆ, ಇದೀಗ ಫೆಬ್ರವರಿಯಲ್ಲಿ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಜನವರಿಯಲ್ಲಿ ಜಂಟಿ ಅಧಿವೇಶನವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್ ನಿರ್ಬಂಧಗಳು ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಈ ತಿಂಗಳು ಅವೇಶನವನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
