ಬೆಂಗಳೂರು,ಫೆ.14- ರಾಜ್ಯಪಾಲರ ನೀರಸ ಭಾಷಣದಿಂದಾಗಿ ಸಂವಿಧಾನದ ಆಶಯಗಳು ಬುಡಮೇಲಾಗಿದ್ದು, ವಿಧಾನಮಂಡಲಕ್ಕೆ ಅಗೌರವ ತೋರಿಸಿದಂತಾಗಿದೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ಬಗ್ಗೆ ಘನತೆ, ಗೌರವವಿದೆ. ಮುಂದಿನ ವರ್ಷ ಸರ್ಕಾರ ಕೈಗೊಳ್ಳುವ ಯೋಜನೆಗಳು, ಪ್ರಸಕ್ತ ಸಾಲಿನ ತಮ್ಮ ಸಾಧನೆಗಳ ಬಗ್ಗೆ ವಿವರಣೆ ನೀಡಬೇಕು. ಆದರೆ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಪತ್ರಕರ್ತರಿಗೆ ಪಾಸ್ ಕೊಟ್ಟಿದ್ದೇವೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದೇವೆ ಎಂದು ಹೇಳುವಷ್ಟರ ಅಪಹಾಸ್ಯದ ಮಟ್ಟಕ್ಕೆ ರಾಜ್ಯಪಾಲರ ಭಾಷಣವನ್ನು ಇಳಿಸಿದೆ. ಇದರಿಂದ ವಿಧಾನಮಂಡಲದ ಗೌರವಕ್ಕೆ ಚ್ಯುತಿ ಬಂದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಜನರ ಚಿಂತನೆಗಳಂತೆ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಕೃಷ್ಣ , ಮಹದಾಯಿ ಯೋಜನೆಗಳ ಬಗ್ಗೆ ಪ್ರಸ್ತಾಪವಿಲ್ಲ. ಆಲಮಟ್ಟಿ ಅಣೆಕಟ್ಟೆಯ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂಬುದು ಸರ್ಕಾರದ ಒತ್ತಾಸೆ. ಆದರೆ, ಅದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಜನತೆಗೆ ರಾಜ್ಯಪಾಲರ ಭಾಷಣದಿಂದ ನಿರಾಸೆಯಾಗಿದೆ ಎಂದು ಅವರು ಬೇಸರವ್ಯಕ್ತಪಡಿಸಿದರು.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕೆಂಬ ಆಗ್ರಹಗಳಿವೆ. ಅದರ ಬಗ್ಗೆಯೂ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಿಲ್ಲ ಎಂದು ಹೇಳಿದರು.
