ಏಪ್ರಿಲ್ 1ರಿಂದ ಪ್ರತಿ ಕುಟುಂಬಕ್ಕೆ 1ಕೆಜಿ ಹೆಚ್ಚುವರಿ ಪಡಿತರ ಅಕ್ಕಿ

Social Share

ಬೆಂಗಳೂರು,ಫೆ.14- ಬಡತನರೇಖೆಗಿಂತ ಕೆಳಗಿರುವ(ಬಿಪಿಎಲ್) ಪಡಿತರಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 5 ಕೆಜಿ ಧಾನ್ಯವನ್ನು ಪ್ರತಿ ತಿಂಗಳು ಹಂಚಲಾಗುತ್ತಿದ್ದು, ಏಪ್ರಿಲ್ 1ರಿಂದ ಜಾರಿಯಾಗುವಂತೆ ಹೆಚ್ಚುವರಿಯಾಗಿ ಒಂದು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಇಂದು ಘೋಷಣೆ ಮಾಡಿದರು.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಹೆಚ್ಚುವರಿಯಾಗಿ ಒಂದು ಕೆಜಿ ನೀಡಲಾಗುವುದು ಎಂದು ತಿಳಿಸಿದರು. ರಾಷ್ಟ್ರದಲ್ಲೇ ಕರ್ನಾಟಕ ಪ್ರಪ್ರಥಮವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ.
ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ವಿದೇಶದಲ್ಲಿರುವ ದೇಶಿ ಸಂಜಾತರ ಜ್ಞಾನವನ್ನು ಸ್ವದೇಶದಲ್ಲಿ ಬಳಸಿಕೊಳ್ಳಲು ಮರಳಿ ತಾಯ್ನಾಡಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಸೂಕ್ತ ನೀತಿ ರಚನೆ ಮತ್ತು ಅನುದಾನ ಬಿಡುಗಡೆ ಮಾಡುವ ಆಶ್ವಾಸನೆಯನ್ನು ನೀಡಿದರು.
ತಮ್ಮ 30 ಪುಟಗಳ ಭಾಷಣದಲ್ಲಿ ಯಾವುದೇ ಹೊಸ ಯೋಜನೆಗಳನ್ನಾಗಿ ಅಥವಾ ಕಾರ್ಯಕ್ರಮಗಳನ್ನು ಘೋಷಣೆ ಮಾಡದ ರಾಜ್ಯಪಾಲರು, ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆಗಾಗಿ ನಡೆಸಿದ ಹೋರಾಟ ಹಾಗೂ ಜಾರಿಗೆ ತಂದಿರುವ ಕಾರ್ಯಕ್ರಮಗಳ ಅನುಷ್ಠಾನ ಹೊರತುಪಡಿಸಿದರೆ ಸರ್ಕಾರದ ಮುಂದುವರೆದ ಕಾರ್ಯಕ್ರಮಗಳನ್ನು ಮಾತ್ರ ಪ್ರಸ್ತಾಪಿಸಿದ್ದಾರೆ.
ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾದ ಹಿನ್ನೆಲೆಯಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೋವಿಡ್ ರೋಗವು ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಸರ್ಕಾರ ಇದನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇದೇ ರೀತಿ ನಾವು ಯಶಸ್ಸು ಕಾಣುತ್ತೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳ, ದೇಶವು ಎರಡು ಲಸಿಕೆಗಳನ್ನು ಉತ್ಪಾದಿಸಿ ಬೇರೆ ದೇಶಗಳಿಗೂ ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಜೊತೆಗೆ ಪ್ರತಿಯೊಬ್ಬರಿಗೂ ಹಂತ ಹಂತವಾಗಿ ತಲುಪುವಂತೆ ನೋಡಿಕೊಂಡಿದ್ದು, ಕೇಂದ್ರ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದರು.
ರಾಜ್ಯದಲ್ಲಿ ಕೋವಿಡ್ 19 ಲಸಿಕೆ ಕಾರ್ಯಕ್ರಮ ಸಮತೋಲನದಲ್ಲಿ ನಡೆಯುತ್ತಿದೆ. ಪ್ರತಿದಿನ 6 ಸಾವಿರ ಲಸಿಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಈವರೆಗೂ 9.3 ಕೋಟಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಒಟು ಜನಸಂಖ್ಯೆಯ ಮೊದಲ ಡೋಸ್ ಹಾಗೂ ಶೇ.85ರಷ್ಟು ಜನರಿಗೆ 2ನೇ ಹಂತದ ಡೋಸ್ ನೀಡಲಾಗಿದೆ ಎಂದರು.
ದೇಶದಲ್ಲಿ ಅತಿಹೆಚ್ಚು ಕೋವಿಡ್ ಟೆಸ್ಟ್‍ಗಳನ್ನು ನಡೆಸಿದ ರಾಜ್ಯದಲ್ಲಿ ಈವರೆಗೂ 6 ಕೋಟಿ ಜನರಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ 540 ಟ್ರಯೆಜೆಸಿಂಗ್ ಸೆಂಟರ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಈವರೆಗೂ ಹೋಮ್ ಐಸೋಲೇಷನ್‍ನಲ್ಲಿ ಆರೈಕೆ ಪಡೆದ ವಯಸ್ಕರು ಮತ್ತು ಮಕ್ಕಳಿಗೆ ಸುಮಾರು 2.5 ಲಕ್ಷ ಐಸೊಲೇಷನ್ ಮೆಡಿಕಲ್ ಕಿಟ್‍ಗಳನ್ನು ನೀಡಲಾಗಿದೆ. ಈ ರೀತಿ ಮುಂದೆಯೂ ವಿತರಿಸಲಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದ ಆಸ್ಪತ್ರೆಗಳಲ್ಲಿ 55,256 ಎಚ್‍ಡಿಯು ಬೆಡ್‍ಗಳು, 7216 ಐಸಿಯು ಬೆಡ್‍ಗಳು, 6,123 ಐಸಿಯು-ವೆಂಟಿಲೇಟರ್ ಬೆಡ್‍ಗಳು, ಜಿಲ್ಲಾ ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ.
9 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆಗಳನ್ನು ಗದಗ ಮತ್ತು ಮಂಗಳೂರು ನಗರಗಳಲ್ಲಿ ಆರಂಭಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ನೂತನವಾಗಿ ಆಯುಷ್ ವಿವಿಯನ್ನು ಪ್ರಾರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅನೇಕ ಮಹತ್ವಪೂರ್ಣ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮ ಪಂಚಾಯ್ತಿಗಳ ಅಮೃತ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಶಾಲಾ ಮೂಲಸೌಕರ್ಯ ಕಾರ್ಯಕ್ರಮ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ನಗರೋತ್ಥಾನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ ಎಂದು ತಿಳಿಸಿದರು.
2022-23 ಹಾಗೂ 2023-24ನೇ ಸಾಲಿಗೆ ಕ್ರಮವಾಗಿ 27.14 ಲಕ್ಷ ಮತ್ತು 17.45 ಲಕ್ಷ ಮನೆಗಳಿಗೆ ನಳನೀರು ಸಂಪರ್ಕ ಕಲ್ಪಿಸಿ ರಾಜ್ಯದಲ್ಲಿನ ಎಲ್ಲ ಗ್ರಾಮೀಣ ಮನೆಗಳಿಗೆ ನಳನೀರು ಸಂಪರ್ಕ ಒದಗಿಸಲು ಯೋಜನೆ ಹಾಕಲಾಗಿದೆ. 5965 ಗ್ರಾಪಂಗಳ ಪೈಕಿ ಘನತ್ಯಾಜ್ಯ ನಿರ್ವಹಣೆಗೆ ಜಾಗ ಲಭ್ಯವಿರುವಂತಹ 5,570 ಗ್ರಾಮಪಂಚಾಯ್ತಿಗಳಿಗೆ ವಿಸ್ತೃತ ಯೋಜನೆ ವರದಿ ಅನುಮೋದನೆ ನೀಡಲಾಗಿದೆ.
ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ 750 ಗ್ರಾಮಗಳನ್ನು ಆಯ್ಕೆ ಮಾಡಿ ಗ್ರಾಮಪಂಚಾಯ್ತಿಗಳ ಸಮಗ್ರ ಅಭಿವೃದ್ದಿಗಾಗಿ ಚಾಲ್ತಿಯಲ್ಲಿರುವ ಯೋಜನೆಗಳ ಅನುದಾನವನ್ನು ಬಳಸಿಕೊಂಡು ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿದೆ.
ತಲಾ ಒಂದು ಗ್ರಾಮಪಂಚಾಯ್ತಿಗಳಿಗೆ ಪ್ರೋತ್ಸಾಹಧನ ಸೇರಿದಂತೆ ಒಟ್ಟು 187.50 ಕೋಟಿ ರೂ.ಗಳನ್ನು ನಿಗದಿಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯವು ಹಾಲು ಉತ್ಪಾದನೆಯಲ್ಲಿ 11ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ, ಮಾಂಸ 10 ಉತ್ಪಾದನೆಯಲ್ಲಿ 10ನೇ ಸ್ಥಾನ ಹೊಂದಿದೆ. ರಾಜ್ಯದ ಜಿಡಿಪಿಗೆ ಶೇ.3.5ರಷ್ಟು ಕೊಡುಗೆಯನ್ನು ಸಹ ನೀಡುತ್ತಿದೆ. ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು 11ನೇ ಸ್ಥಾನದಲ್ಲಿದ್ದೇವೆ ಎಂದರು.
ಬೆಂಗಳೂರು ನಗರ, ತುಮಕೂರು, ರಾಮನಗರ, ಬೆಳಗಾವಿ, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರತೀಯ ಸರ್ವೇಕ್ಷಣ ಸಂಸ್ಥೆಯಲ್ಲಿ ಡ್ರೋಣ್ ಆಧಾರಿತ ಭೂಮಾಪನ ಕಾರ್ಯ, ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯನ್ನು ರಾಜ್ಯದ 14 ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ, ಗ್ರಾಮೀಣ ವಾಸಿಗರಿಗೆ ಅವರ ವಾಸಸ್ಥಳದ ಆಸ್ತಿ ಪತ್ರವನ್ನು ವಿತರಿಸುವ ಯೋಜನೆ ಇದಾಗಿದೆ ಎಂದರು.
ಪಿಂಚಣಿ, ಮಾಶಾಸನ ಪಡೆಯುತ್ತಿರುವ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಮಾಶಾಸನ ವ್ಯವಸ್ಥೆ ಜಾರಿ ಮಾಡಲಾಗಿದೆ. ಅತಿವೃಷ್ಟಿಯಿಂದ ಸತತವಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ರಾಜ್ಯದಲ್ಲಿ ಜನ, ಜಾನುವಾರು ಪ್ರಾಣ ಕಳೆದುಕೊಂಡರು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ದೃತಿಗೆಡದೆ ಸಂತ್ರಸ್ತರ ನೆರವಿಗೆ ಧಾವಿಸಿತ್ತು.
2021ನೇ ಸಾಲಿನಲ್ಲಿ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ದೊಡ್ಡ ಪ್ರಮಾಣದ ನಷ್ಟ ಉಂಟಾಯಿತು. ಸಂತ್ರಸ್ತರ ರಕ್ಷಣೆಗಾಗಿ 496 ಕಾಳಜಿ ಕೇಂದ್ರಗಳನ್ನು ತೆರೆದು 1,38,504 ಜನರಿಗೆ ಆಶ್ರಯ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಶಾಲೆಗಳ ಅಭಿವೃದ್ದಿ: ಪ್ರಸಕ್ತ ವರ್ಷದಲ್ಲಿ ರಾಜ್ಯದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಅಭ್ಯಾಸಿಸಿದ ಶಾಲೆಗಳ ಸಮಗ್ರ ಅಭಿವೃದ್ದಿಗಾಗಿ 16.88 ಕೋಟಿ ಅನುದಾನ ಒದಗಿಸಲಾಗಿದೆ. 2021-22ನೇ ಸಾಲಿನ ಯೋಜನೆಯಡಿ 577.71 ಕೋಟಿ ಮೊತ್ತದ ಕೇಂದ್ರದ ಪಾಲಿನ ಅನುದಾನಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಒಟ್ಟು 1469.2 ಕೋಟಿ ಮೊತ್ತದ ಅನುದಾನವನ್ನು ಒದಗಿಸಲಾಗಿದೆ ಎಂದು ವಿವರಿಸಿದರು.
ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಆನ್‍ಲೈನ್ ವ್ಯವಸ್ಥೆ, ಸಾರ್ವಜನಿಕರು ಸಂಪರ್ಕ ರಹಿತವಾಗಿ ಚಾಲನಾ ಅನುಜ್ಞಾ ಪತ್ರ, ವಾಹನ ನೋಂದಣಿ ಪ್ರಮಾಣ ಪತ್ರ ಒಳಗೊಂಡಂತೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ಪಡೆದುಕೊಳ್ಳಬಹುದು.
ಬೆಂಗಳೂರು ಮತ್ತು ಪ್ರಮುಖ ನಗರಗಳಲ್ಲಿ ಸಾರ್ವಜನಿಕರು ಲಾಸ್ಟ್ ಮೈಲ್ ಕನೆಕ್ಟಿವಿಟಿ ಒದಗಿಸಲು ಬೈಕ್ ಟಾಕ್ಸಿ ಯೋಜನೆ ಜಾರಿಗೊಳಿಸಲಾಗಿದೆ ಮಹಿಳಾ ಸುರಕ್ಷಿತಾ ಮೊಬೈಲ್ ಆಪ್ ಅಭಿವೃದ್ಧಿ, 500 ಬಸ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬಸ್ ನಿಲ್ದಾಣಗಳಲ್ಲಿ ಪ್ಯಾಸೆಂಜರ್ ಡಿಸ್‍ಪ್ಲೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದೇವೆ.
ನಬಾರ್ಡ್ ಸಹಯೋಗದಲ್ಲಿ ಆರ್‍ಐಡಿಎಫ್ 25ರ ಯೋಜನೆಯಡಿ 3330 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಟ್ಟಡಗಳ ನಿರ್ಮಾಣ ಕೈಗೊಂಡಿದ್ದು, ಇದರಲ್ಲಿ 2800 ಕಟ್ಟಡಗಳು ಪೂರ್ಣಗೊಂಡಿವೆ. ಅಮೃತ ಗ್ರಾಮ ವಸತಿ ಯೋಜನೆಯಡಿ 750 ಗ್ರಾಪಂಗಳ ವ್ಯಾಪ್ತಿಯಲ್ಲಿ ವಸತಿರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸಲು ಉದ್ದೇಶಿಸಲಾಗಿದೆ. ಧಾರವಾಡ, ವಿಜಯನಗರ, ಮೈಸೂರು ಜಿಲ್ಲೆಗಳಲ್ಲಿರುವ ಸರ್ಕಾರಿ ಮಾಲೀಕತ್ವದ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ವಸತಿರಹಿತ 3.3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದರು.
ನಾಗರಿಕರ ಮನೆಬಾಗಿಲಿಗೆ ಸರ್ಕಾರವು ಸೇವೆಗಳನ್ನು ತಲುಪಿಸಿ ಅವರ ದೈನಂದಿನ ಜೀವನವನ್ನು ಸುಗಮ ಮತ್ತು ಸರಳಗೊಳಿಸುವ ಉದ್ದೇಶದಿಂದ ಜನ ಸೇವಕ್ ಯೋಜನೆ, ಸರ್ಕಾರದ ಎಲ್ಲ ಇಲಾಖೆಗಳ ಸೇವೆಯನ್ನು ಆನ್‍ಲೈನ್ ಮುಖಾಂತರ ವಿವಿಧ ನಾಗರಿಕ ಸೇವಾ ಕೇಂದ್ರಗಳಾದ ಗ್ರಾಮ-ಒನ್, ಬೆಂಗಳೂರು ಒನ್, ಸಿಎಸ್‍ಸಿ ಸೇವಾ ಕೇಂದ್ರಗಳು, ಕರ್ನಾಟಕ ಕೇಂದ್ರಗಳ ಮೂಲಕ ನಾಗರಿಕರಿಗೆ ನೀಡಲಾಗುತ್ತಿದೆ.
ಕೇಂದ್ರ ಸರ್ಕಾರದಿಂದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಹೂಡಿಕೆಯೂ ಸೇರಿದಂತೆ ಎಲ್ಲ ಶಾಸನಬದ್ದ ಅನುಮೋದನೆ ದೊರಕಿದೆ. ಪ್ರಸ್ತುತ ರಾಷ್ಟ್ರೀಯ ಯೋಜನೆಯ ಮಾನ್ಯತೆ ಪಡೆಯುವ ಕಾರ್ಯವು ಅಂತಿಮ ಹಂತದಲ್ಲಿದೆ ಎಂದರು.
ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟವನ್ನು ಮಾಪನ ಮಾಡಲು 7 ಹೊಸ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ರಾಜ್ಯದ ಇತರೆ ತೀವ್ರ ಮಾಲಿನ್ಯ ಹೊಂದಿದ ನಗರಗಳಲ್ಲಿಯೂ ನಾಲ್ಕು ಸಂಖ್ಯೆಯ ಮಾಪನ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಉದ್ಯಮಿಯಾಗು ಉದ್ಯೋಗದಾತರಾಗಿ ಎಂಬ ಘೋಷಣೆಯಡಿ ಹೂಡಿಕೆದಾರರನ್ನು ಆಕರ್ಷಿಸುವುದು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಯೋಜನೆ ಇದಾಗಿದೆ. ಕಳೆದ ತ್ರೈಮಾಸಿಕ ಅವಯಲ್ಲಿ ಕರ್ನಾಟಕ ವಿದೇಶಿ ನೇರ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

Articles You Might Like

Share This Article