ಸೋಮವಾರದಿಂದ ವಿಧಾನಮಂಡಲ ಅಧಿವೇಶನ, ಸದ್ದುಮಾಡಲಿದೆ ಹಿಜಾಬ್-ಕೇಸರಿ ವಿವಾದ

Social Share

ಬೆಂಗಳೂರು,ಫೆ.12- ಹಿಜಾಬ್ ಹಾಗೂ ಕೇಸರಿ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.  ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಅಂದು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯ ಸಭಾಂಗಣದಲ್ಲಿ ವಿಧಾನಮಂಡಲದ ಎರಡೂ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಮಂಡನೆ ಆಗಲಿದ್ದು, ಭಾಷಣದ ಮೇಲಿನ ಚರ್ಚೆಗೆ ಚಾಲನೆ ದೊರೆಯಲಿದೆ. ಇದೇ 14 ರಿಂದ 25ರವರೆಗೆ ಈ ಅಧಿವೇಶನ ನಡೆಯಲಿದೆ. ಸಾಮಾನ್ಯವಾಗಿ ಈವರೆಗೂ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇಂಗ್ಲಿಷ್‍ನಲ್ಲಿ ಭಾಷಣ ಮಾಡುತ್ತಿದ್ದರು. ಆದರೆ, ಮಾಜಿ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಹಿಂದಿಯಲ್ಲಿ ಭಾಷಣಕ್ಕೆ ನಾಂದಿ ಹಾಡಿದ್ದರು. ಇದನ್ನು ಈಗಿನ ರಾಜ್ಯಪಾಲರು ಮುಂದುವರೆಸುವ ಸಾಧ್ಯತೆ ಇದೆ .
ನಿರೀಕ್ಷೆಯಂತೆ ಸದ್ಯ ರಾಜ್ಯಾದ್ಯಂತ ಭಾರೀ ಸಂಘರ್ಷಕ್ಕೆ ಕಾರಣವಾಗುತ್ತಿರುವ ಹಿಜಾಬ್ ಹಾಗೂ ಕೇಸರಿ ಸಂಘರ್ಷ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೀಗ ಸದನದಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲು ಇದಕ್ಕೆ ಎಲ್ಲ ತಯಾರಿ ನಡೆಯುತ್ತಿದ್ದು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಬಿಜೆಪಿ ಮುಖಂಡರು ನೀಡಿರುವ ವಿವಾದಾತ್ಮಕ ಹೇಳಿಕೆಗಳು ಸಹ ಸದನದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಸರ್ಕಾರದ ವಿರುದ್ಧ ಹೋರಾಟ ನಡೆಸಲು ವಿರೋಧ ಪಕ್ಷಗಳು ಸಜ್ಜಾಗಿದ್ದರೆ, ವಿರೋಧ ಪಕ್ಷಗಳ ಮಾತಿನ ಬಾಣ ಎದುರಿಸಲು ಆಡಳಿತ ಪಕ್ಷವೂ ಸಿದ್ದತೆ ನಡೆಸುತ್ತಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಸಾಕಷ್ಟು ಮಹತ್ವದ ವಿಷಯಗಳ ಕುರಿತಾಗಿ ಸದನದಲ್ಲಿ ಚರ್ಚೆ ನಡೆಯಲಿದೆ.
ಈ ಬಾರಿ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಆಡಳಿತ ಪಕ್ಷವನ್ನು ಕಟ್ಟಿಹಾಕಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಕೈ ಬತ್ತಳಿಕೆಯಲ್ಲಿ ಅಸ್ತ್ರಗಳನ್ನು ಸಜ್ಜುಗೊಳಿಸುತ್ತಿದ್ದು, ಸದನದಲ್ಲಿ ಸರಕಾರದ ವಿರುದ್ದ ಬಾಣ ಪ್ರಯೋಗಕ್ಕೆ ಮುಖಂಡರು ತಯಾರಿ ನಡೆಸುತ್ತಿದ್ದಾರೆ.
ಆಡಳಿತ ಪಕ್ಷದ ವಿರುದ್ಧ ಸಡ್ಡು ಹೊಡೆಯಲು ಕಾಂಗ್ರೆಸ್ ಹಲವಾರು ಬಾಣಗಳನ್ನು ಬತ್ತಳಿಕೆಯಲ್ಲಿ ಇಟ್ಟುಕೊಂಡಿದೆ. ಈ ಕುರಿತು ಸೋಮವಾರ ಸಂಜೆ 6 ಗಂಟೆಗೆ ಶಾಸಕಾಂಗ ಸಭೆ ಕರೆಯಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಹ ಆರೋಪಗಳಿಗೆ ದಾಖಲೆ ಮೂಲಕ ಉತ್ತರ ಕೊಡಲು ಬಿಜೆಪಿ ಸಜ್ಜಾಗುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿ ಇದು ಎರಡನೇ ಅಧಿವೇಶನವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷವಾಗಿ ಸರ್ಕಾರದ ನಿಲುವುಗಳನ್ನು ಸಮರ್ಥನೆ ಮಾಡಲು ಸಿಎಂ ಶಾಸಕರು ಹಾಗೂ ಸಚಿವರಿಗೆ ದಾಖಲೆಗಳ ಜೊತೆಗೆ ಉತ್ತರ ನೀಡಲು ಸಜ್ಜಾಗಿ ಬರುವಂತೆ ಸೂಚನೆ ನೀಡಲಾಗಿದೆ.
ಸೋಮವಾರ ಇತ್ತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಯಾವ ವಿಚಾರಗಳನ್ನು ಪ್ರಸ್ತಾಪ ಮಾಡಬೇಕು ಎಂಬ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ವಿರೋಧ ಪಕ್ಷವಾಗಿ ಕಾಂಗ್ರೆಸ್ ವಿಫಲವಾಗಿತ್ತು. ಬಿಟ್ ಕಾಯಿನ್, ಭ್ರಷ್ಟಾಚಾರ ಆರೋಪ ಅಸ್ತ್ರಗಳು ಕಾಂಗ್ರೆಸ್ ಬತ್ತಳಿಕೆಯಲ್ಲಿ ಇದ್ದರೂ ಅದನ್ನು ಪ್ರಯೋಗ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆ ಗಳಿಗೆಯಲ್ಲಿ ಸಚಿವ ಬೈರತಿ ಬಸವರಾಜ ವಿರುದ್ಧದ ಭೂಹಗರಣದ ಆರೋಪವನ್ನು ಎತ್ತಿಕೊಂಡರೂ ಅದೂ ಸಫಲವಾಗಿರಲಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಅಧಿವೇಶನದಲ್ಲಿ ಸರಕಾರಕ್ಕೆ ಮುಜುಗರ ಮಾಡುವ ವಿಚಾರ ಚರ್ಚಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನೀರಾವರಿ ಯೋಜನೆಗಳ ವಿಳಂಬ: ಮೇಕೆದಾಟು, ಮಹದಾಯಿ ಯೋಜನೆಗಳು ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಮೇಕೆದಾಟು ಯೋಜನೆ ಜÁರಿಗೆ ಅಗ್ರಹಿಸಿ ಹೋರಾಟವನ್ನು ನಡೆಸಿತ್ತು ಕಾಂಗ್ರೆಸ್. ಕೋವಿಡ್ ಕಾರಣಕ್ಕಾಗಿ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.
ಇದೀಗ ಮೇಕೆದಾಟು ಮಹದಾಯಿ ಸೇರಿದಂತೆ ರಾಜ್ಯದ ಮಹತ್ವದ ನೀರಾವರಿ ಯೋಜನೆಗಳಲ್ಲಿ ವಿಳಂಬವಾಗುತ್ತಿದೆ ಎಂಬುವುದನ್ನು ಸದನದಲ್ಲಿ ಪ್ರಸ್ತಾಪಿಸುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ. ಇದರ ಜೊತೆಗೆ ಬಿಟ್ ಕಾಯಿನ್ ಹಾಗೂ ರಾಜ್ಯ ಸರಕಾರದ ವಿರುದ್ಧ ಕೇಳಿಬಂದ 40 ಪರ್ಸೆಂಟ್ ಕಮಿಷನ್ ಆರೋಪವೂ ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಈ ಎಲ್ಲಾ ವಿಚಾರವಾಗಿ ಫೆ.14ರಂದು ನಡೆಯಲಿರುವ ಸಿಎಲ್‍ಪಿ ಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ.ಬೆಳಗಾವಿ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡದೇ ಇದ್ದದ್ದು ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಮುಖಂಡರು ಬಿಟ್ ಕಾಯಿನ್ ವಿಚಾರವಾಗಿ ಏಕೆ ಮËನ ವಹಿಸುತ್ತಿದ್ದಾರೆ ಎಂಬ ಪ್ರಶ್ನೆಯೂ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಬಿಟ್ ಕಾಯಿನ್ ಹಾಗೂ 40 ಪರ್ಸೆಂಟ್ ಆರೋಪ ಚರ್ಚೆಗೆ ಬರುವ ಸಾಧ್ಯತೆ ಇದೆ.
10 ದಿನಗಳ ಕಾಲ ನಡೆಯಲಿರುವ ಅವೇಶದಲ್ಲಿ ಯಾವ ಯಾವ ವಿಚಾರಗಳನ್ನು ಚರ್ಚೆಗೆ ಕೈಗೆತ್ತಿಗೊಳ್ಳಬೇಕು ಹಾಗೂ ಆಡಳಿತ ಪಕ್ಷದ ವಿರುದ್ಧ ಸದನದಲ್ಲಿ ಯಾವ ರೀತಿಯಾಗಿ ಹೋರಾಟ ರೂಪಿಸಬೇಕು ಎಂಬ ನಿಟ್ಟಿನಲ್ಲಿ ಸಿಎಲ್‍ಪಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಬೆಳಗಾವಿ ಅಧಿವೇಶನದಲ್ಲಿ ಪ್ರಮುಖವಾಗಿ ಬೆಲೆ ಏರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ರೂಪಿಸಿತ್ತು. ಈ ಬಾರಿ ಇತರೆ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ಇಕ್ಕಟ್ಟಿಗೆ ಸಿಲುಕಿಸಲು ಚಿಂತನೆ ನಡೆದಿದೆ.
ಒಟ್ಟಿನಲ್ಲಿ ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಹಲವು ವಿಚಾರಗಳ ಕುರಿತಾಗಿ ಚರ್ಚೆ ನಡೆಯಲಿದೆ. ಅಷ್ಟೇ ಅಲ್ಲದೆ ಕೆಲವೊಂದು ಮಹತ್ವದ ಮಸೂದೆಗಳು ಅಧಿವೇಶನದಲ್ಲಿ ಅಂಗೀಕಾರಗೊಳ್ಳಲಿದೆ.

Articles You Might Like

Share This Article