ಜಾಲಿರೈಡ್‍ಗಾಗಿ ಬೈಕ್ ಕಳವು: ಇಬ್ಬರು ಆರೋಪಿಗಳ ಸೆರೆ

Social Share

ಬೆಂಗಳೂರು,ಅ.12- ಜಾಲಿರೈಡಿಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 14 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 11 ಸ್ಟೈಲಿಶ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮಮೂರ್ತಿನಗರ ವಾರ್ಡ್‍ನ ಪ್ರಶಾಂತ್ ಅಲಿಯಾಸ್ ಆರ್.ವಿ(25) ಮತ್ತು ಕೆ.ಆರ್.ಪುರದ ವಿಜಯ ಬ್ಯಾಂಕ್ ಕಾಲೋನಿ ನಿವಾಸಿ ಮೊಹಮ್ಮದ್ ರೋಷನ್ ಅಲಿಯಾಸ್ ರೋಷನ್(25) ಬಂಧಿತರು.

ಅಕ್ಟೋಬರ್ 2ರಿಂದ 6ರವರೆಗೆ ವಿವಿಧ ಪ್ರಕರಣಗಳ ತನಿಖೆ ಕೈಗೊಂಡ ಕೊತ್ತನೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಜಾಲಿ ರೈಡ್‍ಗಾಗಿ ಸ್ಟೈಲಿಶ್ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದುದ್ದಾಗಿ ತಿಳಿಸಿದ್ದಾರೆ.

ಆರೋಪಿಗಳು ಈ ಹಿಂದೆ ಕೊತ್ತನೂರು, ಹೆಣ್ಣೂರು, ಕೆಜಿಹಳ್ಳಿ, ಪುಲಿಕೇಶಿನಗರ, ಸಂಪಿಗೆಹಳ್ಳಿ, ಆವಲಹಳ್ಳಿ ಹಾಗೂ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಆರೋಪಿಗಳ ಬಂಧನದಿಂದ ಕೊತ್ತನೂರು ಪೊಲೀಸ್ ಠಾಣೆಯ ನಾಲ್ಕು ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿದ್ದು, 14 ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ಹಿಮಾಲಯನ್, ಡಾಮಿನಾರ್, ಕೆಟಿಎಂ ಡ್ಯೂಕ್, ಅಪಾಚಿ ಸೇರಿದಂತೆ ಒಟ್ಟು 11 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಗಿರುತ್ತಾರೆ.

ಒಟ್ಟಾರೆ ಹತ್ತು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ವಾಹನದ ಮಾಲೀಕರ ವಿಳಾಸ ಪತ್ತೆ ಮಾಡಿ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತರಾದ ಡಾ.ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಸಂಪಿಗೆಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಟಿ.ರಂಗಪ್ಪ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಚನ್ನೇಶ್ ಅವನ್ನೊಳಗೊಂಡ ಸಿಬ್ಬಂದಿ ತಂಡ ಈ ಪ್ರಕರಣದ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article