ಕೊಹ್ಲಿ ದಾಖಲೆ ಮುರಿಯುವತ್ತ ಬಟ್ಲರ್ ಚಿತ್ತ

Spread the love

ಅಹಮದಾಬಾದ್, ಮೇ 29- ಪ್ರಸಕ್ತ ಐಪಿಎಲ್‍ನಲ್ಲಿ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ರಾಜಸ್ಥಾನ್ ರಾಯಲ್ಸ್‍ನ ಸ್ಫೋಟಕ ಆಟಗಾರ ಜೋಸ್ ಬಟ್ಲರ್ ಇಂದು ನಡೆಯಲಿರುವ ಫೈನಲ್ ಪಂದ್ಯದಲ್ಲೂ ಗುಜರಾತ್ ಟೈಟಾನ್ಸ್ ವಿರುದ್ಧ ಮತ್ತೊಂದು ಶತಕ ಸಿಡಿಸುವ ಮೂಲಕ ಆರ್‍ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆ ಮುರಿಯುವತ್ತ ಚಿತ್ತ ಹರಿಸಿದ್ದಾರೆ.

ವಿರಾಟ್ 2016ರ ಐಪಿಎಲ್ ಋತುವಿನಲ್ಲಿ 4 ಶತಕ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದರಾದರೂ ಕ್ವಾಲಿಫೈಯರ್ 2 ಪಂದ್ಯದಲ್ಲಿ ಜೋಸ್ ಬಟ್ಲರ್ ಆಕರ್ಷಕ ಸೆಂಚುರಿ (106 * ರನ್ ) ಗಳಿಸುವ ಮೂಲಕ ಕೊಹ್ಲಿಯ ದಾಖಲೆ ಸರಿಗಟ್ಟಿದ್ದು ಇಂದಿನ ಪಂದ್ಯದಲ್ಲಿ ಸೆಂಚುರಿ ಬಾರಿಸುವ ಮೂಲಕ ಐಪಿಎಲ್‍ನಲ್ಲಿ ನೂತನ ದಾಖಲೆಯನ್ನು ಬರೆಯಲು ಬಟ್ಲರ್ ಸಜ್ಜಾಗಿದ್ದಾರೆ.

ಇಂಗ್ಲೆಂಡ್‍ನ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಲೀಗ್‍ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಈ ಋತುವಿನ ಮೊದಲ ಶತಕ ಗಳಿಸಿದ್ದರೆ, ನಂತರ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕ್ವಾಲಿಫೈಯರ್ 2ನಲ್ಲಿ ಆರ್‍ಸಿಬಿ ವಿರುದ್ಧವೂ ಶತಕ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಗಳಿಸಿರುವ ಯೂನಿವರ್ಸಲ್ ಬಾಸ್ ಕ್ರಿಸ್‍ಗೇಲ್ (6 ಶತಕ)ರ ದಾಖಲೆ ಸರಿಗಟ್ಟುವ ಅವಕಾಶವು ಬಟ್ಲರ್ ಬಳಿ ಇದೆ, ಜೋಸ್ ಕಳೆದ ಐಪಿಎಲ್‍ನಲ್ಲಿ ಎಸ್‍ಆರ್‍ಎಚ್ ವಿರುದ್ಧ ಶತಕ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ 5 ಶತಕ ದಾಖಲಿಸಿದ್ದಾರೆ.

2022ರ ಐಪಿಎಲ್‍ನಲ್ಲಿ ಜೋಸ್ ಬಟ್ಲರ್ 824 ರನ್ ಗಳಿಸಿದ್ದು ಇಂದಿನ ಪಂದ್ಯದಲ್ಲಿ 150 ರನ್ ಗಳಿಸಿದರೆ 2016ರ ಐಪಿಎಲ್‍ನಲ್ಲಿ ಕೊಹ್ಲಿ ನಿರ್ಮಿಸಿರುವ 973 ರನ್‍ಗಳ ದಾಖಲೆಯನ್ನು ಬಟ್ಲರ್ ಮುರಿಯಲಿದ್ದಾರೆ.

Facebook Comments