ಡಿಕೆಶಿ ಜೊತೆಗಿದ್ದ ಜಿಟಿಡಿ ದೇವೇಗೌಡರನ್ನು ಕಂಡ ಕೂಡಲೇ ಎಸ್ಕೇಪ್..!

Spread the love

ಮೈಸೂರು, ನ.8-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಾಥ್ ನೀಡುವ ಮೂಲಕ ಜಿ.ಟಿ.ದೇವೇಗೌಡ ಅಚ್ಚರಿ ಮೂಡಿಸಿದರು. ಬೆಳಿಗ್ಗೆ ಶಿವಕುಮಾರ್ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ವೇಳೆ ಜಿ.ಟಿ.ದೇವೇಗೌಡ ಆಗಮಿಸಿ ಹೂಗುಚ್ಛ ನೀಡಿ ಅವರಿಗೆ ಶುಭ ಹಾರೈಸಿದರು. ಪೂಜೆ ಮುಗಿಯುವ ತನಕವೂ ಜಿ.ಟಿ.ದೇವೇಗೌಡರು, ಡಿ.ಕೆ.ಶಿವಕುಮಾರ್ ಜತೆಯೇ ಇದ್ದುದು ಎಲ್ಲರಲ್ಲೂ ಕುತೂಹಲ ಮೂಡಿಸಿತು.

ಈಗಾಗಲೇ ಜೆಡಿಎಸ್‍ನಿಂದ ಒಂದು ಕಾಲು ಹೊರಗಿಟ್ಟಿರುವ ಜಿಟಿಡಿ ಡಿಕೆಶಿಯೊಂದಿಗೆ ಕೆಲ ಸಮಯ ಕಳೆದಿದ್ದು ರಾಜಕೀಯ ವಲಯದಲ್ಲಿ ಕೆಲವು ಅನುಮಾನ ಹುಟ್ಟುಹಾಕಿದೆ. ಶಿವಕುಮಾರ್ ಜತೆಗೆ ಬರುತ್ತಿದ್ದಾಗ ದೇವಾಲಯದ ಪ್ರವೇಶದ್ವಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪಕ್ಷದ ಕೆಲವು ಮುಖಂಡರು ಬರುತ್ತಿದ್ದುದನ್ನು ಕಂಡು ತಕ್ಷಣ ಅಲ್ಲಿಂದ ಅದ್ಯಾವ ಮಾಯದಲ್ಲೋ ಎಲ್ಲೋ ಹೊರಟು ಹೋಗಿದ್ದರು.

# ಡಿಕೆಶಿಗೆ ಸಾ.ರಾ.ಮಹೇಶ್ ಸಾಥ್
ನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಕೂಡಾ ಸಾಥ್ ನೀಡಿದರು. ಡಿ.ಕೆ.ಶಿವಕುಮಾರ್ ಮಠಕ್ಕೆ ಆಗಮಿಸುವ ಮೊದಲೇ ಸಾ.ರಾ.ಮಹೇಶ್ ಗೇಟ್‍ನಲ್ಲಿ ನಿಂತಿದ್ದರು. ನಂತರ ಅವರೊಂದಿಗೆ ಒಳಗೆ ತೆರಳಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿಯವರನ್ನು ಭೇಟಿಯಾಗಿ ಇಬ್ಬರೂ ಆಶೀರ್ವಾದ ಪಡೆದರು.

ಈ ವೇಳೆ ಮಠದಲ್ಲಿ ಪೂಜೆ ಸಲ್ಲಿಸಿ ಸ್ವಾಮೀಜಿಗಳು ಇಬ್ಬರೂ ಮುಖಂಡರಿಗೆ ಪ್ರಸಾದ ನೀಡಿದರು.ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಜಾಗ ನೀಡಿದ್ದು ನಾನು: ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಜಾಗ ನೀಡಿರುವುದು ನಾನು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಆದಿಚುಂಚನಗಿರಿ ಮಠದಲ್ಲಿ ಮಾತನಾಡಿದ ಅವರು, ನಾನು ಮೈಸೂರು ರಾಜಕುಟುಂಬದವರಿಂದ ನಾಲ್ಕು ಎಕರೆ ಜಾಗ ಪಡೆದಿದ್ದೆ. ಇದರಲ್ಲಿ ಎರಡು ಎಕರೆ ಜಾಗವನ್ನು ಚಾಮುಂಡಿ ವಿಹಾರ ಕ್ರೀಡಾಂಗಣ ನಿರ್ಮಿಸಲು ಉಚಿತವಾಗಿ ನೀಡಿದ್ದೇನೆ. ನಾನು ಜಾಗ ನೀಡುವ ಸಂದರ್ಭದಲ್ಲಿ ವಾಸು ಅವರು ಮೈಸೂರು ಮೇಯರ್ ಆಗಿದ್ದರು ಎಂದು ತಿಳಿಸಿದರು.

Facebook Comments