ಜುಲೈ 26ರಂದು ಸಿಎಂ ಕುರ್ಚಿ ಬಿಟ್ಟು ಕೆಳಗಿಳಿಯುವರೇ ಬಿಎಸ್‍ವೈ..!?

Spread the love

ಬೆಂಗಳೂರು,ಜು.21- ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಎರಡು ವರ್ಷ ತುಂಬುತ್ತಿರುವ ಶುಭ ಮುಹೂರ್ತದಲ್ಲಿಯೇ ಅನಿರೀಕ್ಷಿತ ರಾಜಕೀಯ ವಿದ್ಯಮಾನಗಳ ಭಾಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಯಡಿಯೂರಪ್ಪನವರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ಬಳಿಕ ಸಿಎಂ ಸ್ಥಾನಕ್ಕೆ ವಿದಾಯ ಹೇಳುವ ತೀರ್ಮಾನಕ್ಕೆ ಬಂದಿದ್ದಾರೆಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಜುಲೈ 26ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಆಗಲಿದೆ. ಕಳೆದ 2019ರ ಜುಲೈ 26 ರಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಜುಲೈ 26ರಂದೇ. ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿಯೇ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದಾಯ ಭಾಷಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 25ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕರೆದಿದ್ದಾರೆ.

ಅಂದು ಬಿಜೆಪಿಯ ಎಲ್ಲಾ ಶಾಸಕರು ಮತ್ತು ಸಚಿವರಿಗೆ ಔತಣಕೂಟ ಸಹ ಏರ್ಪಡಿಸಲಾಗಿದ್ದು, ಈ ಸಭೆಯಲ್ಲಿ ಎರಡು ವರ್ಷ ಆಡಳಿತ ನಡೆಸಲು ಸಹಕಾರ ನೀಡಿದ ಶಾಸಕರಿಗೆ, ಸಚಿವರಿಗೆ ಧನ್ಯವಾದಗಳನ್ನು ಸಮರ್ಪಿಸಲಿದ್ದಾರೆ ಎನ್ನಲಾಗುತ್ತಿದೆ. ಮರುದಿನ ಜುಲೈ 26ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ತಮ್ಮ ಸರ್ಕಾರದ ಸಾಧನಾ ಸಮಾವೇಶವನ್ನು ಸಹ ಸಿಎಂ ಯಡಿಯೂರಪ್ಪನವರು ಕರೆದಿದ್ದಾರೆ. ಎರಡು ವರ್ಷದ ಸರ್ಕಾರದ ಸಾಧನೆಗಳ ಬಗ್ಗೆ ಈ ಸಭೆಯಲ್ಲಿ ಭಾಷಣ ಮಾಡಿ, ವಿದಾಯದ ನುಡಿಗಳನ್ನೂ ಆಡಲಿದ್ದಾರೆ ಎಂಬ ಮಾತುಗಳು ಬಿಜೆಪಿಯ ಪಡಸಾಲೆಯಲ್ಲಿ ಕೇಳಿಬರತೊಡಗಿವೆ.

# ರಾಜೀನಾಮೆಗೂ ಮುನ್ನ ಶಿವಮೊಗ್ಗ ಪ್ರವಾಸ:

ಮುಂದಿನ ವಾರ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡುವ ಮುನ್ನ ಸಿಎಂ ಯಡಿಯೂರಪ್ಪನವರು ತವರು ಜಿಲ್ಲೆ ಶಿವಮೊಗ್ಗ ಹಾಗೂ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಪ್ರವಾಸ ಕೈಗೊಂಡು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಜು.22ರಂದು ಸಂಪುಟ ಸಭೆಯ ಬಳಿಕ ಹುದ್ದೆಯ ಪದತ್ಯಾಗ ನಿರ್ಣಯ ಮಾಡುವ ನಿರ್ಧಾರಕ್ಕೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಕೆಲವೊಂದು ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಉದ್ದೇಶದಿಂದ ಇದೇ 22ರಂದು ಸಂಜೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ಯಡಿಯೂರಪ್ಪನವರು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ದೆಹಲಿ ಭೇಟಿಯ ಬಳಿಕ ಜುಲೈ 26 ಅಥವಾ ಆಗಸ್ಟ್ 15 ಒಳಗಾಗಿ ಬಿಎಸ್‍ವೈ ರಾಜೀನಾಮೆ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಹೈಕಮಾಂಡ್‍ನಿಂದ ಇನ್ನೂ ದೃಢಪಟ್ಟಿಲ್ಲ. ಈ ನಡುವೆ ಬಿಎಸ್‍ವೈ ಪಾಳಯ ಕೂಡಾ ಕೈಕಟ್ಟಿ ಕುಳಿತುಕೊಂಡಿಲ್ಲ. ನಾಯಕತ್ವ ಬದಲಾವಣೆ ಅಷ್ಟೊಂದು ಸುಲಭ ಅಲ್ಲ ಎಂಬ ಸಂದೇಶವನ್ನು ರವಾನೆ ಮಾಡುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಲಿಂಗಾಯತ ಸಮುದಾಯದ ಬೆಂಬಲವನ್ನು ಪಡೆಯುವ ಯತ್ನದಲ್ಲಿದ್ದಾರೆ ಯಡಿಯೂರಪ್ಪ.

ದೆಹಲಿ ಭೇಟಿಗೆ ಮುನ್ನ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಹಲವು ಮಠಗಳಿಗೂ ಭೇಟಿ ನೀಡಿ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದ್ದರು. ಈ ಭೇಟಿಯೂ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.ಅದರಲ್ಲೂ ಇದೀಗ ವಿರೋಧ ಪಕ್ಷಗಳ ಮುಖಂಡರು ಕೂಡಾ ಬಿಎಸ್‍ವೈ ಬೆಂಬಲಕ್ಕೆ ನಿಲ್ಲುವ ಮೂಲಕ ಬಿಎಸ್‍ವೈ ಲಿಂಗಾಯತರ ಪ್ರಶ್ನಾತೀತ ನಾಯಕ ಎಂದು ಹೇಳಿದ್ದಾರೆ.

ಸಹಜವಾಗಿ ಇದು ಸಮುದಾಯದಲ್ಲೂ ಮುಂದಿನ ದಿನಗಳಲ್ಲಿ ಒಂದು ನಿಲುವಿಗೆ ಬರಲು ಕಾರಣವಾಗಬಹುದು. ರಾಜ್ಯದ ಒಂದು ಪ್ರಭಾವಿ ಸಮುದಾಯ ಬಿಎಸ್‍ವೈ ಪರವಾಗಿ ನಿಂತು ಬಿಟ್ಟರೆ ಹೊಸ ತಲೆನೋವನ್ನು ಸೃಷ್ಟಿಸಬಹುದು. ಈ ಕಾರಣಕ್ಕಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಕೂಡಾ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.

ಒಟ್ಟಿನಲ್ಲಿ ಜುಲೈ 26 ರ ಡೆಡ್ಲೆಲೈನ್ ಒಳಗಾಗಿ ಕಮಲ ಪಾಳಯದಲ್ಲಿ ಹಲವಾರು ಬೆಳವಣಿಗೆಗಳು ನಡೆಯುವುದಂತೂ ಸ್ಪಷ್ಟ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದು ಇದೀಗ ಅವಮಾನಕಾರಿಯಾಗಿ ರಾಜಕೀಯ ಜೀವನ ಅಂತ್ಯಗೊಳಿಸಲು ಬಿ.ಎಸ್. ಯಡಿಯೂರಪ್ಪ ಖಂಡಿತಾ ತಯಾರಿಲ್ಲ. ಈ ನಿಟ್ಟಿನಲ್ಲಿ ಅಂತಿಮ ಹಂತದಲ್ಲಿ ಏನೆಲ್ಲಾ ಪ್ರಯೋಗಗಳು ನಡೆಯಲಿವೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.