ಬೆಂಗಳೂರು, ಜು.15- ರಾಜ್ಯದಲ್ಲಿ ಮುಂಗಾರು ಚೇತರಿಕೆಯಾಗಿದ್ದು, ಕಳೆದ ಎರಡು ವಾರದಲ್ಲಿ ವಾಡಿಕೆಗಿಂತ ಶೇ.106ರಷ್ಟು ಮಳೆಯಾಗಿದೆ. ಜುಲೈ 1ರಿಂದ ಜುಲೈ 14ರ ನಡುವಿನ ಅವಧಿಯಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 118ಮಿ.ಮೀ. ಆಗಿದ್ದು, 243ಮಿ.ಮೀ.ನಷ್ಟು ಮಳೆಯಾಗಿದ್ದು, ಒಟ್ಟಾರೆ ಶೇ.106ರಷ್ಟು ಹೆಚ್ಚು ಮಳೆಯಾದಂತಾಗಿದೆ.
ಜೂನ್ ಮೊದಲ ಮೂರು ವಾರ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳು ಮಳೆ ಕೊರತೆ ಎದುರಿಸುತ್ತಿದ್ದವು. ಜೂನ್ ಕೊನೆ ವಾರದಿಂದ ಚೇತರಿಕೆ ಕಂಡ ಮುಂಗಾರು ಇನ್ನೂ ತಗ್ಗಿಲ್ಲ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅತಿವೃಷ್ಟಿ , ಪ್ರವಾಹ, ಭೂಕುಸಿತ ಉಂಟಾಗಿದೆ.
ಕಳೆದ ಎರಡು ವಾರದಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.85ರಷ್ಟು, ಉತ್ತರ ಒಳನಾಡಿನಲ್ಲಿ ಶೇ.102ರಷ್ಟು ಹಾಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಶೇ.109ರಷ್ಟು ವಾಡಿಕೆಗಿಂತ ಅಧಿಕ ಪ್ರಮಾಣದ ಮಳೆಯಾಗಿದೆ.
ಕಳೆದ ಜನವರಿಯಿಂದ ಜು.14ರ ನಡುವಿನ ಅವಧಿಯಲ್ಲಿ ಸರಾಸರಿ ಶೇ.46ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 437ಮಿ.ಮೀ. ಆಗಿದ್ದು, 637ಮಿ.ಮೀ.ನಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.92, ಉತ್ತರ ಒಳನಾಡಿನಲ್ಲಿ ಶೇ.45, ಮಲೆನಾಡಿನಲ್ಲಿ ಶೇ.39 ಹಾಗೂ ಕರಾವಳಿಯಲ್ಲಿ ಶೇ.29ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಮುಂಗಾರು ಆರಂಭವಾದ ಜೂನ್‍ನಿಂದ ಈತನಕ ಶೇ.26ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 318ಮಿ.ಮೀ. ವಾಡಿಕೆ ಮಳೆಯಾಗಿದ್ದು, 399ಮಿ.ಮೀ.ನಷ್ಟು ರಾಜ್ಯದಲ್ಲಿ ಮಳೆಯಾಗಿದೆ. ಅದರಲ್ಲೂ ದಕ್ಷಿಣ ಒಳನಾಡಿನಲ್ಲಿ ಅತ್ಯಧಿಕ ಶೇ.83ರಷ್ಟು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.23, ಕರಾವಳಿ ಹಾಗೂ ಮಲೆನಾಡಿನಲ್ಲಿ ಶೇ.19ರಷ್ಟು ವಾಡಿಕೆಗಿಂತ ಅಕ ಮಳೆಯಾಗಿದೆ.
ನಿರಂತರವಾಗಿ ಮಳೆಯಾಗುತ್ತಿದ್ದು, ಮೋಡ ಮುಸುಕಿದ ವಾತಾವರಣವಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಕೆಲವೆಡೆ ತುಂತುರು ಹನಿ ಬೀಳುವುದರಿಂದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದ್ದು, ತಂಪಾದ ವಾತಾವರಣ ಸೃಷ್ಟಿಯಾಗಿದೆ.
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದಿದೆ. ಮುಂಗಾರು ಹಂಗಾಮಿನ ಬಿತ್ತನೆ ಮಾಡಲು ಕೂಡ ಆಗದೆ ರೈತರು ಪರಿತಪಿಸುವಂತಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನ ಹೆಚ್ಚು ಕಡಿಮೆ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
ನಿನ್ನೆ ಮಡಿಕೇರಿ, ವಿರಾಜ್‍ಪೇಟೆ, ಸಕಲೇಶಪುರ, ಸುಳ್ಯ, ಮೂಡಿಗೆರೆ, ಬೆಳ್ತಂಗಡಿ, ಕಾರ್ಕಳ, ಶೃಂಗೇರಿ, ಕೊಪ್ಪ, ಮನರಸಿಂಹರಾಜಪುರ, ತೀರ್ಥಹಳ್ಳಿ, ಕುಂದಾಪುರ, ಹೆಬ್ರಿ, ಹೊಸನಗರ, ಸಾಗರ, ಶಿರಸಿ, ಕುಮ್ಟಾ, ಹೊನ್ನಾವರ, ಭಟ್ಕಳ, ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಕರಾವಳಿ ಭಾಗದಲ್ಲೂ ಮಳೆ ಇಳಿಮುಖವಾಗಿದೆ. ಆದರೆ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಗುರ ಮಳೆಯಾದ ವರದಿಯಾಗಿದೆ. ಎಲ್ಲೂ ಕೂಡ ಭಾರೀ ಮಳೆಯಾದ ವರದಿಯಾಗಿಲ್ಲ.