ಜಂಬೂ ಸವಾರಿಗೆ ತೀವ್ರ ಕಟ್ಟೆಚ್ಚರ, ಯಾವುದೇ ಆತಂಕವಿಲ್ಲ ಎಂದ ಸಚಿವ ಸೋಮಣ್ಣ

Spread the love

ಮೈಸೂರು, ಅ.6- ವಿಜಯದಶಮಿ ಮೆರವಣಿಗೆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ದಸರಾ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.

ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ಇಂದು ಬೆಳಗಿನಿಂದಲೇ ಶ್ವಾನದಳ, ಬಾಂಬ್ ಸ್ಕ್ವಾಡ್ ತಂಡದವರು ಎಲ್ಲ ರೀತಿಯ ತಪಾಸಣಾ ಕಾರ್ಯ ನಡೆಸಿದರು. ಇಂದು, ನಾಳೆ ಹಾಗೂ ನಾಡಿದ್ದು ಈ ಮೂರು ದಿನಗಳ ಕಾಲವೂ ಬಿಗಿ ಭದ್ರತೆ ಹಿನ್ನೆಲೆಯಲ್ಲಿ ತಪಾಸಣೆ ಚುರುಕುಗೊಳಿಸಿದೆ. ಮೈಸೂರಿಗೆ ಐದು ಬಾಂಬ್ ಸ್ಕ್ವಾಡ್ ತಂಡ ಆಗಮಿಸಿದ್ದು, ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದ ತಂಡದವರಿಗೆ ಮೆರವಣಿಗೆ ನಡೆಯುವ ಮಾರ್ಗದುದ್ದಕ್ಕೂ ಸ್ಥಳ ನಿಗದಿಪಡಿಸಿದ್ದು, ಅಲ್ಲಿಂದಲೇ ತಪಾಸಣೆ ನಡೆಸಲಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಮಾತನಾಡಿ, ದಸರೆಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾರ್ವಜನಿಕರು ಭಯ-ಭೀತಿ ಇಲ್ಲದೆ ಭಾಗವಹಿಸಿ ಅಗತ್ಯವಾದ ಎಲ್ಲ ಭದ್ರತೆ ಕೈಗೊಂಡಿದ್ದೇವೆ. ನಿರ್ಭೀತಿಯಿಂದ ದಸರೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದ್ದಾರೆ.

# ದಸರಾ ಮಹೋತ್ಸವಕ್ಕೆ ಆತಂಕ ಇಲ್ಲ: ಸೋಮಣ್ಣ
ಮೈಸೂರು ದಸರಾ ಮಹೋತ್ಸವಕ್ಕೆ ಯಾವುದೇ ರೀತಿಯ ಆತಂಕ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.ಶ್ರೀರಂಗಪಟ್ಟಣದಲ್ಲಿ ನಿನ್ನೆ ಶಂಕಿತ ಉಗ್ರರನ್ನು ವಶಕ್ಕೆ ಪಡೆಯಲಾಗಿದೆಯಂತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನಾನು ಕೂಡಾ ಶ್ರೀರಂಗಪಟ್ಟಣಕ್ಕೆ ತೆರಳಿದ್ದೆ, ಜನರಲ್ಲಿ ಯಾವುದೇ ಆತಂಕ ಬೇಡ. ಎಲ್ಲಾ ಬೆಳವಣಿಗೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂದು ಹೇಳಿದರು.

ದಸರಾ ನಂತರ ಶಂಕಿತರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ. ಈಗ ನಗರದಲ್ಲಿ ಯಾವುದೇ ಆತಂಕ ಇಲ್ಲ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಗುಪ್ತಚರ ಇಲಾಖೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಬಗ್ಗೆ ಹೆಚ್ಚಾಗಿ ಮಾತನಾಡುವುದು ಬೇಡ. ಜನರನ್ನು ಭಯಭೀತಿಗೊಳಿಸಲು ಇಂತಹ ಷಡ್ಯಂತ್ರ ರೂಪಿಸಲಾಗಿರುತ್ತದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಒಂದು ಹೆಜ್ಜೆ ಮುಂದಿರುತ್ತದೆ ಎಂದು ಸೋಮಣ್ಣ ತಿಳಿಸಿದರು.  ತಾಯಿ ಚಾಮುಂಡೇಶ್ವರಿ ಸುಮ್ಮನೆ ಕುಳಿತಿಲ್ಲ. ದೇವಿ ನಗರದಲ್ಲಿ ಸಂಚಾರ ಮಾಡುತ್ತಿದ್ದಾಳೆ. ಆ ತಾಯಿಯ ರಕ್ಷಣೆ ನಮ್ಮ ಮೇಲಿದೆ ಎಂದು ಸಚಿವರು ತಿಳಿಸಿದರು.

Facebook Comments