ನವದೆಹಲಿ,ಜ.21- ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ಅವರು ಪತ್ರಕರ್ತ ತರುಣ್ ತೇಜ್ಪಾಲ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.2013ರ ಅತ್ಯಾಚಾರ ಪ್ರಕರಣದಲ್ಲಿ ತಾವು ಖುಲಾಸೆಗೊಂಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ರಹಸ್ಯವಾಗಿ ನಡೆಸಬೇಕೆಂದು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ತರುಣ್ ತೇಜ್ಪಾಲ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ಅವರು ನಿರಾಕರಿಸಿದ್ದಾರೆ.
2016ರಲ್ಲಿ ಒಂದು ಹಂತದಲ್ಲಿ ಈ ವಿಷಯದಲ್ಲಿ ಗೋವಾರಾಜ್ಯದ ಪರವಾಗಿ ಹಾಜರಾಗಿದ್ದೆ. ಆದ್ದರಿಂದ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದಿನ ವಾರ ಈ ವಿಷಯ ಬೇರೆಯಾವುದಾದರೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿ ಎಂದು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಜೊತೆಗೆ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ರಾವ್ ಅವರು ತಿಳಿಸಿದರು.
ಭಾರತೀಯ ಅಪರಾಧ ದಂಡ ಸಂಹಿತೆಯ ಕಲಂ 327ರ ಅನ್ವಯ ಪ್ರಕರಣದ ವಿಚಾರಣೆಯನ್ನು ಗೌಪ್ಯವಾಗಿ ನಡೆಸಬೇಕು ಎಂದು ತೇಜ್ಪಾಲ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಪೀಠವು ನಡೆಸಬೇಕಿತ್ತು. ತೇಜ್ಪಾಲ್ ಸಲ್ಲಿಸಿದ್ದ ಈ ಮನವಿಯನ್ನು ಬಾಂಬೆ ಹೈಕೋರ್ಟಿನ ಗೋವಾ ಪೀಠ ಕಳೆದ ವರ್ಷದ ನವೆಂಬರ್ 24ರಂದು ತಿರಸ್ಕರಿಸಿತ್ತು.
2013ರ ನವೆಂಬರ್ನಲ್ಲಿ ತೆಹೆಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಅಂದಿನ ಮಹಿಳಾ ಸಹೋದ್ಯೋಗಿ ಮೇಲೆ ಗೋವಾದ ಪಂಚತಾರಾ ಹೋಟೆಲೊಂದರ ಲಿಫ್ಟ್ನಲ್ಲಿ ಲೈಂಗಿಕ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು 2021ರ ಮೇನಲ್ಲಿ ತೇಜ್ಪಾಲ್ರನ್ನು ಖುಲಾಸೆಗೊಳಿಸಿತ್ತು. ರಾಜ್ಯ ಸರ್ಕಾರವು ಹೈಕೋರ್ಟ್ನ ಗೋವಾ ಪೀಠದಲ್ಲಿ ಈ ಆದೇಶವನ್ನು ಪ್ರಶ್ನಿಸಿತ್ತು.
