ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಜಿಟಿಡಿ ಆಗ್ರಹ

Social Share

ಬೆಂಗಳೂರು, ಆ.9- ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿ
ಸುವಂತೆ ರಾಜ್ಯ ಸರ್ಕಾರವನ್ನು ಶಾಸಕ ಜಿ.ಟಿ ದೇವೇಗೌಡರು ಆಗ್ರಹಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮೀಜಿಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

ಈ ವೇಳೆ ಮಾತನಾಡಿದ ದೇವೇಗೌಡರು, ಪರಿಶಿಷ್ಟ ಪಂಗಡಕ್ಕೆ ನ್ಯಾಯಯುತವಾದ ಮೀಸಲಾತಿ ಕೊಡಲು ಸಾಧ್ಯವಾಗದಿದ್ದರೆ ಎಲ್ಲ ವರ್ಗದ ಮೀಸಲಾತಿಯನ್ನು ರದ್ದುಗೊಳಿಸಿ, ಅನ್ಯಾಯಕ್ಕೆ ಒಳಗಾಗಿರುವ ಬಡತನ ರೇಖೆಯಲ್ಲಿರುವ ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿದರು.

ಸ್ವಾಮೀಜಿ ಅವರ ಈ ಹೋರಾಟ ನ್ಯಾಯಯುತವಾಗಿದೆ. ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಿರುವುದನ್ನು ವಿರೋಧಿಸಿ ಸ್ವಾಮೀಜಿಗಳು 6 ತಿಂಗಳಿಂದ ನಿರಂತವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಮುದಾಯದವರಿಗೆ ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ್ಯ ಹಾಗೂ ಸಮಾನತೆಗಾಗಿ ಸ್ವಾಮೀಜಿಗಳು ಮಾಡುತ್ತಿರುವ ಹೋರಾಟವನ್ನು ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ನಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಅವರ ವರದಿಯನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ. ಅವರು ಸಂವಿಧಾನವನ್ನು ಅಧ್ಯಯನ ಮಾಡಿದ್ದಾರೆ. ಸಂಶೋಧನೆ ಮಾಡಿದ್ದಾರೆ. ಹೀಗಾಗಿ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಜಿಟಿಡಿ ಒತ್ತಾಯಿಸಿದರು.

ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಜಿ.ಟಿ. ದೇವೇಗೌಡರು ಕ್ಷೇತ್ರದಲ್ಲಿ ಎಲ್ಲ ವರ್ಗದವರನ್ನು ಸಮನಾಗಿ ಕಾಣುವ ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕರೆದುಕೊಂಡು ಹೋಗುವ ಸರ್ವ ಜನಾಂಗದ ನಾಯಕರಾಗಿದ್ದಾರೆ. ನಮ್ಮ ಸಮುದಾಯವು ದೇವೇಗೌಡರಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲಲಿದೆ ಎಂದು ಘೋಷಿಸಿದರು.

ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ವೈಯಕ್ತಿಕವಾಗಿ 10 ಲಕ್ಷ ರೂ. ನೀಡಿರುವುದನ್ನು ಸ್ಮರಿಸಿದ ಶ್ರೀಗಳು, ಅದನ್ನು ತೇರು ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದ್ಬೂರು ಮಹದೇವಸ್ವಾಮಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜವರನಾಯ್ಕ, ಜಯಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭೈರೇಶ್, ಗ್ರಾಮ ಪಂಚಾಯತ್ ಸದಸ್ಯರಾದ ರೇಣುಕಾ, ನಾಗರಾಜು, ಮಂಜುನಾಥ್, ಕಡಕೋಳ ಕುಮಾರಸ್ವಾಮಿ, ರಂಗಪ್ಪ, ಗುಮಚಹಳ್ಳಿ ಚಿಕ್ಕಣ್ಣ, ಮದ್ದೂರು ಶಿವಣ್ಣ, ಟಿ ಕಾಟೂರು ಸಿದ್ದರಾಜು, ಮಾರ್ಬಳ್ಳಿ ವೆಂಕಟೇಶ್, ಎಡಹಳ್ಳಿ ಫೆÇೀಟೋ ರಮೇಶ್, ಟೆನ್ನಿಸ್ ಗೋಪಿ, ಮುತಲಿಬ್ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Articles You Might Like

Share This Article