ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಹೃದಯಾಘಾತದಿಂದ ನಿಧನ

Social Share

ಬೆಂಗಳೂರು, ಜ.23- ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ನದಿನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಲ್.ಮಂಜುನಾಥ್ (68) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿ ತೋಟದ ಮನೆಯಲ್ಲಿ ನಿನ್ನೆ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕೆ.ಎಲ್.ಮಂಜುನಾಥ್ ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ತಡರಾತ್ರಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿರುವ ಅವರ ನಿವಾಸಕ್ಕೆ ತಂದು ಇಂದು ಮಧ್ಯಾಹ್ನ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ನಂತರ ಸಂಜೆ ನೆಲಮಂಗಲ ತಾಲ್ಲೂಕಿನ ಕೆಂಪಲಿಂಗನಹಳ್ಳಿ ಬಳಿಯ ಯಲಚಗೆರೆಯ ಅವರ ತೋಟದಲ್ಲಿ ಅಪಾರ ಬಂಧು-ಮಿತ್ರರು, ಅಭಿಮಾನಿಗಳ ಅಶ್ರುತರ್ಪಣದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ನ್ಯಾಯಮೂರ್ತಿ ಮಂಜುನಾಥ್ ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಕಾಂತರಾಜಪುರದಲ್ಲಿ 1953ರಲ್ಲಿ ಜನಿಸಿದ್ದು, 1974ರಲ್ಲಿ ವಕೀಲರಾಗಿ ಹೈಕೋರ್ಟ್‍ನಲ್ಲಿ ಅಭ್ಯಾಸ ಆರಂಭಿಸಿ ಬಳಿಕ 2000ದಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು.2001ರಲ್ಲಿ ಪೂರ್ಣಪ್ರಮಾಣದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2015ರ ಏಪ್ರಿಲ್ 21ರಂದು ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳಾಗಿ 14 ವರ್ಷ 4 ತಿಂಗಳ ಕಾಲ ವಿವಿಧ ಸ್ಥರಗಳಲ್ಲಿ ದುಡಿದಿದ್ದ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿಯಾಗಿದ್ದಾಗಲೇ ಸುಮಾರು 10 ಸಾವಿರ ತೀರ್ಪುಗಳನ್ನು ನೀಡಿದ್ದರು.
ವಕೀಲರಾಗಿ, ನ್ಯಾಯಮೂರ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದ ಅವರು ಹೈಕೋರ್ಟ್‍ನಲ್ಲಿ ವಕೀಲರ ಗುಮಾಸ್ತರ ಸಂಘದ ಸ್ಥಾಪನೆಗೆ ಕಾರಣರಾಗಿದ್ದರು. ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರು ರಾಜ್ಯ ಗಡಿ ಆಯೋಗದ ಆಧ್ಯಕ್ಷರಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದರು.
ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಬಗೆಹರಿಸುವ ಸಂಬಂಧದ ಹಲವು ಸಲಹೆಗಳನ್ನು ಪಡೆಯುವ ಸಲುವಾಗಿ ಸರ್ಕಾರ ಈ ಆಯೋಗವನ್ನು ರಚನೆ ಮಾಡಿದ್ದು, ಸರ್ಕಾರಕ್ಕೆ ನ್ಯಾಯಮೂರ್ತಿಗಳು ಉಪಯುಕ್ತ ಸಲಹೆ ಮತ್ತು ಶಿಫಾರಸುಗಳನ್ನು ನೀಡಿದ್ದರು.
ನ್ಯಾಯಮೂರ್ತಿ ಮಂಜುನಾಥ್ ಅವರು ವಕೀಲ ವೃತ್ತಿ ಅವಯಲ್ಲಿ ಬಡವರಿಗೆ, ದೀನದಲಿತರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಕಾನೂನು ಹೋರಾಟ ನಡೆಸಿದ್ದರು. ಕಾನೂನು ಚೌಕಟ್ಟಿನೊಳಗೆ ಜನಪರ ಕಾಳಜಿ ಹಾಗೂ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಮೂಲಕ ನ್ಯಾಯಾಂಗದ ಘನತೆ, ಗೌರವ ಎತ್ತಿ ಹಿಡಿದ ನ್ಯಾಯಮೂರ್ತಿಗಳು.
# ಗಣ್ಯರ ಸಂತಾಪ:
ಮಂಜುನಾಥ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಕೆ.ಗೋಪಾಲಯ್ಯ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಮಾಜಿ ಉಪಮಹಾಪೌರ ರಂಗಣ್ಣ, ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜು, ಹೈಕೋರ್ಟ್ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು, ವಕೀಲರ ಸಂಘದ ಪದಾಕಾರಿಗಳು ಸೇರಿದಂತೆ ಹಲವು ಗಣ್ಯರು ಅವರ ನಿವಾಸಕ್ಕೆ ತೆರಳಿ ಮೃತರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಿದರು.
# ಮಂಜುನಾಥ್ ನಿಧನ ತುಂಬಲಾರದ ನಷ್ಟ :
ಬೆಂಗಳೂರು, ಜ.23- ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಕೆ.ಎಲï.ಮಂಜುನಾಥ್ ಅವರ ನಿಧನಕ್ಕೆ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಕಂಬನಿ ಮಿಡಿದಿದ್ದಾರೆ. ಕಾನೂನು ಇತಿಮಿತಿಯಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ತಮ್ಮ ಸಂತಾಪ ಸೂಚಕದಲ್ಲಿ ಸಚಿವರು ತಿಳಿಸಿದ್ದಾರೆ.
ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನ್ಯಾ.ಮಂಜುನಾಥ್ ಅವರು ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ಹಿತರಕ್ಷಣಾ ಆಯೋಗದ ಅಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದರು ಎಂದು ಗೋಪಾಲಯ್ಯ ತಿಳಿಸಿದ್ದಾರೆ.
# ಮಾನವೀಯ ಮುಖದ ನ್ಯಾಯಮೂರ್ತಿಗಳ ಅಗಲುವಿಕೆ :
ಬೆಂಗಳೂರು, ಜ.23- ಕಕ್ಷಿದಾರರ ಸಮಸ್ಯೆಗಳನ್ನು ಮಾನವೀಯ ನೆಲೆಯನ್ನು ನೋಡಿ ಸಂಧಾನದ ಮೂಲಕವೇ ಬಗೆ ಹರಿಸಿಕೊಡುತ್ತಿದ್ದ ಕೆ.ಎಲ್.ಮಂಜುನಾಥ್ ಅವರು ಬಹಳಷ್ಟು ಮಂದಿಗೆ ನಿರಂತರವಾಗಿ ಮಾರ್ಗದರ್ಶಿಗಳಾಗಿದ್ದರು.
ನ್ಯಾಯಮೂರ್ತಿ ಕೆ ಎಲ್ ಮಂಜುನಾಥ್ ಅವರದು ವಿಶಿಷ್ಟ ವ್ಯಕ್ತಿತ್ವ . ಗಾಂನಗರದ ಅವರ ವಕೀಲ ಕಚೇರಿಯಲ್ಲಿ ಅರಳಿದ ವಕೀಲರ ಸಂಖ್ಯೆ ಅಗಣಿತ . ನಾನು ಪತ್ರಕರ್ತನಾಗಿದ್ದ ದಿನಗಳಲ್ಲಿ ಅವರ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ . ನನ್ನ ಅಣ್ಣ ವೆಂಕಟೇಶ್ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮ ಭಾಗದ ಬಹುತೇಕ ಕಕ್ಷಿದಾರರಿಗೆ ವಕೀಲರಾಗಿ ಸಹಾಯ ಮಾಡುತ್ತಿದ್ದ ಮಂಜುನಾಥ್ ಅವರ ಮಾನವೀಯ ಮುಖ ನೋಡಿ ತಾವು ಬೆರಗಾಗಿದ್ದಾಗಿ ತಿಳಿಸಿದ್ದಾರೆ.
ವಿರಸದ ವಿಷ ಹೊತ್ತು ಕೋರ್ಟ್ ಮೆಟ್ಟಿಲೇರಲು ಬರುತ್ತಿದ್ದ ಹಲವಾರು ರೈತರಿಗೆ , ಪ್ರತಿಷ್ಠಿತ ಕುಟುಂಬದ ಸದಸ್ಯರಿಗೆ ಬುದ್ದಿಮಾತು ಹೇಳಿ ಮಾತುಕತೆ ಮೂಲಕವೇ ಸಮಸ್ಯೆ ಬಗೆಹರಿಸಿದ ಹಲವು ನಿದರ್ಶನಗಳಿವೆ . ಮಂಜಣ್ಣ ಎಂದೇ ಪ್ರಚಲಿತರಾಗಿದ್ದ ಮಂಜುನಾಥ್ ಅವರು ಸಹಸ್ರಾರು ವಕೀಲರಿಗೆ ನಿರಂತರ ಮಾರ್ಗದರ್ಶಿಯಾಗಿದ್ದರು.
ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳಿಗೆ ಗೌರವ ಕಾನೂನು ಸಲಹೆಗಾರು . ಸರ್ಕಾರ ಹಾಗು ಸಂಘಸಂಸ್ಥೆಗಳ ವಿರುದ್ಧ ಕಾನೂನು ಹೋರಾಟ ಮಾಡಲು ಮುನ್ನುಗ್ಗುತ್ತಿದ್ದ ವ್ಯಕ್ತಿಗಳಿಗೆ ಹಿತವಚನ ಹೇಳಿ ಅವರ ಸಮಯ ಹಾಗು ಹಣವನ್ನು ರಕ್ಷಿಸಿದ ಪ್ರಕರಣಗಳನ್ನು ತಾವು ಕಂಡಿದ್ದಾಗಿ ತಿಳಿಸಿದ್ದಾರೆ.
ಕನ್ನಡ ನಾಡು ನುಡಿಗೆ ಸದಾ ಸ್ಪಂದಿಸುತ್ತಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕಾನೂನು ಹೋರಾಟ ಮಾಡಿದ್ದರು. ನ್ಯಾಯಮೂರ್ತಿಗಳಾಗಿ ಅವರು ಕಾನೂನಿನ ಚೌಕಟ್ಟಿನನಲ್ಲೆ ಮಾನವೀಯ ಮುಖ ಅರಸುತ್ತಿದ್ದರು . ನ್ಯಾಯಾಂಗ, ಶಾಸಕಾಂಗ, ಕಾರ್ಯಂಗ, ಪತ್ರಿಕಾರಂಗ ಈ ಎಲ್ಲ ರಂಗಗಲ್ಲೂ ಪರಿಣಿತಿ ಸಾಸಿದ್ದ ಮುಂಜುನಾಥ್ ಅಜಾತ ಶತ್ತುವಾಗಿದ್ದರು. ನಮ್ಮ ಜಿಲ್ಲೆಯ ಕಾಂತರಾಜಪುರದಲ್ಲಿ ಜನಿಸಿ ಅವರ ಕಾರ್ಯ ಕ್ಷೇತ್ರದಲ್ಲಿ ಏರಿದ ಒಂದೊಂದು ಮೆಟ್ಟಿಲುಗಳ ಕಥೆ ರೋಚನೀಯ ಎಂದಿದ್ದಾರೆ.
ಆಂಧ್ರಪ್ರದೇಶದ ಸರ್ಕಾರದ ಹಿಂದುದುಳಿದ ಆಯೋಗದ ಅಧ್ಯಕ್ಷರಾಗಿ ನಮ್ಮ ರಾಜ್ಯ ಸರ್ಕಾರದ ಗಡಿ ಮತ್ತು ನದಿ ನೀರು ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಅವರ ಸೇವೆ ಸ್ಮರಣೀಯ. ಅವರ ನೀಡಿದ ಹಲವು ಜೀವನ ಮಾರ್ಗದರ್ಶನಗಳು ತಮ್ಮಲ್ಲಿ ಹಸಿರಾಗಿವೆ ಎಂದು ಹೇಳಿದ್ದಾರೆ.
-ಎಚ್.ಬಿ.ದಿನೇಶ್, ನಿವೃತ್ತ ಜಂಟಿ ನಿರ್ದೇಶಕರು,
ವಾರ್ತಾ ಇಲಾಖೆ
# ನದಿ, ಗಡಿ ವಿಷಯದಲ್ಲಿ ಸಮರ್ಥ ಸೇವೆ :
ಬೆಂಗಳೂರು, ಜ.23- ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ.ಕೆ.ಎಲï. ಮಂಜುನಾಥ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾನೂನಿನ ಚೌಕಟ್ಟಿನ ಒಳಗೇ ಮಾನವೀಯ ಮೌಲ್ಯ ಹಾಗೂ ಜನಪರ ಕಾಳಜಿ ಮೆರೆದಿದ್ದ ಮಂಜುನಾಥ್ ಅವರು ನ್ಯಾಯಾಂಗ ವ್ಯವಸ್ಥೆಯ ಘನತೆ, ಗೌರವಗಳನ್ನು ಎತ್ತಿ ಹಿಡಿದಿದ್ದರು.
ಅವರ ನಿಧನ ಬಹಳ ನೋವು ತಂದಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೈತ್ರಿ ಸರಕಾರದ ಅವಯಲ್ಲಿ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ ರಚಿಸಿದ ಕರ್ನಾಟಕ ರಾಜ್ಯ ನದಿ ನೀರು ಮತ್ತು ಗಡಿ ರಕ್ಷಣೆ ಆಯೋಗಕ್ಕೆ ನ್ಯಾ.ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಆಯೋಗವು ಸರಕಾರಕ್ಕೆ ಅನೇಕ ಉಪಯುಕ್ತ ಸಲಹೆ ಮತ್ತು ಶಿಫಾರಸ್ಸುಗಳನ್ನು ನೀಡಿದೆ ಎಂದು ಅವರು ಸ್ಮರಿಸಿಕೊಂಡಿದ್ದಾರೆ.
ಮೂಲತಃ ಚನ್ನರಾಯಪಟ್ಟಣದ ಕಾಂತರಾಜಪುರದವರಾದ ನ್ಯಾ. ಮಂಜುನಾಥ್ ಅವರು ವಕೀಲಿ ವೃತ್ತಿ ಅವಯಲ್ಲಿ ಬಡವರಿಗೆ, ದೀನ, ದಲಿತರಿಗೆ ಉಚಿತ ಕಾನೂನು ಸೇವೆ ಒದಗಿಸಿದ್ದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿಯೂ ಕಾನೂನು ಹೋರಾಟ ನಡೆಸಿದ್ದರು. ಅವರು ನ್ಯಾಯಮೂರ್ತಿ ಆಗಿದ್ದ ಅವಯಲ್ಲಿ ಹಲವು ಅತ್ಯಮೂಲ್ಯ ತೀರ್ಪುಗಳನ್ನು ನೀಡಿದ್ದರು ಎಂದು ಶ್ಲಾಘಿಸಿದ್ದಾರೆ.
ನ್ಯಾ. ಮಂಜುನಾಥ್ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು, ಬಂಧುಗಳು, ಅಭಿಮಾನಿಗಳಿಗೆ ನೀಡುವಂತೆ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಿವಕುರ್ಮಾ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
# ಕಾನೂನು ಮಿತಿಯಲ್ಲೇ ಮಾನವೀಯ ತೀರ್ಪು :
ಬೆಂಗಳೂರು, ಜ.23- ರಾಜ್ಯ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಕೆ.ಎಲï.ಮಂಜುನಾಥ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ಅವರ ನಿಧನದ ವಾರ್ತೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಕಾನೂನು ಇತಿಮಿತಿಯಲ್ಲೇ ಮಾನವೀಯ ನೆಲೆಗಟ್ಟಿನಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ಬರೆದಿದ್ದ ಅವರ ಅಗಲಿಕೆ ನಾಡಿಗೆ ದೊಡ್ಡ ನಷ್ಟವಾಗಿದೆ. ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರನ್ನು ತಾವು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ಹಿತರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆ ಜವಾಬ್ದಾರಿಯನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು ಎಂದಿದ್ದಾರೆ.

Articles You Might Like

Share This Article