ಕೋವಿಡ್ ಲಸಿಕೆ ಪಡೆದವರು ಯಾವುದೇ ಕಾರಣಕ್ಕೂ ಮೈ ಮರೆಯಬಾರದು: ಸಚಿವ ಸುಧಾಕರ್ ಎಚ್ಚರಿಕೆ

ಬೆಂಗಳೂರು,ಜ.17- ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿ ಆರಂಭವಾಗಿದ್ದು, ಲಸಿಕೆ ತೆಗೆದುಕೊಂಡವರು ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೈ ಮರೆಯಬಾರದು ಎಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು.  ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಒಂದೇ ದಿನ 4200 ಸಿಬ್ಬಂದಿಗೆ ವ್ಯಾಕ್ಸಿನ್ ವಿತರಿಸುವ ಕಾರ್ಯ ಎರಡು ವಿಭಾಗಗಳಲ್ಲಿ ನಡೆಯುತ್ತಿದ್ದು, ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ಪ್ರಾರಂಭವಾದ ಲಸಿಕೆ ವಿತರಣೆ ಅಭಿಯಾನದಲ್ಲಿ ಶೇ.62ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದು, ಯಾರಿಗೂ ಯಾವುದೇ ರೀತಿಯ ಅಡ್ಡಪರಿಣಾಮ ಆಗಿಲ್ಲ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಗಳ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಸುದರ್ಶನ್ ಬಲ್ಲಾಳ್ ಅವರು ಕೂಡ ಲಸಿಕೆ ಪಡೆದಿದ್ದು ಅವರು ಕೂಡ ತಮ್ಮ ಅನುಭವ ತಿಳಿಸಿದ್ದಾರೆ. ಅವರಿಗೂ ಕೂಡ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ತಿಳಿಸಿದರು.  ಕೊರೊನಾ ವ್ಯಾಕ್ಸಿನ್ ಪಡೆದ ಮೇಲೆ 28 ದಿನಗಳ ನಂತರ 2ನೇ ಡೋಸ್ ಪಡೆಯಬೇಕಾಗುತ್ತದೆ. ಅಲ್ಲಿಯವರೆಗೆ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಯಮಾವಳಿಗಳನ್ನು ಪಾಲನೆ ಮಾಡದಿದ್ದರೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಾವು ಈಗ ಕೊರೊನಾ ಲಸಿಕೆ ಪಡಿದಿದ್ದೇವೆ. ನಮಗೇನೂ ಆಗುವುದಿಲ್ಲ ಎಂಬ ಧೋರಣೆಯನ್ನು ಜನ ಬಿಡಬೇಕು.

ಮೊದಲ ಡೋಸ್ ಪಡೆದ 28 ದಿನಗಳು, 2ನೇ ಡೋಸ್ ಪಡೆದ 14 ದಿನಗಳವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಆರೋಗ್ಯ ಇಲಾಖೆಯ ನಿಯಮಾವಳಿಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು. ಲಸಿಕೆ ತೆಗೆದುಕೊಂಡ ಸಂದರ್ಭದಲ್ಲಿ ಆಲ್ಕೋಹಾಲ್ ಸೇವಿಸಬಾರದು. ಕಾರಣ ಇದರ ಶಕ್ತಿಯನ್ನು ಆಲ್ಕೋಹಾಲ್ ಕಡಿಮೆ ಮಾಡುತ್ತದೆ ಎಂಬ ವಾಡಿಕೆಯಿದೆ. ಇದರ ಬಗ್ಗೆ ವರದಿ ತರಿಸಿಕೊಂಡು ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಿದರು.

ಈಗ ಲಸಿಕೆ ಪಡೆದವರಿಗೆ 28 ದಿನಗಳ ನಂತರ 2ನೇ ಡೋಸ್ ನೀಡಲಾಗುವುದು. ಲಸಿಕೆಗೆಂದು ನೋಂದಣಿ ಮಾಡಿಸಿಕೊಂಡವರು ಕಾರಣಾಂತರಗಳಿಂದ ಲಸಿಕೆ ಪಡೆಯದಿದ್ದರೆ ಅಂಥವರು ಲಸಿಕೆ ಪಡೆಯಲು ಅವಕಾಶ ಮಾಡಿಕೊಡಲಾಗುವುದು. ನಾಳೆಯಿಂದ ಹೆಚ್ಚಿನ ಹಂತದಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಲಸಿಕೆ ಪಡೆದವರಿಗೆ ಯಾವುದೇ ರೀತಿಯ ತೀವ್ರ ಪರಿಣಾಮ ಬೀರಿದರೆ ಅಂಥವರಿಗೆ ಪರಿಹಾರ ನೀಡುವ ಬಗ್ಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ನಿನ್ನೆ ರಾಜ್ಯಾದ್ಯಂತ 14 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ. ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಅತ್ಯಂತ ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.

ಸೌಜನ್ಯ ಭೇಟಿ:
ರಾಜ್ಯಕ್ಕೆ ಆಗಮಿಸಿರುವ ಅಮಿತ್ ಷಾ ಅವರನ್ನು ಸೌಜನ್ಯವಾಗಿ ಭೇಟಿ ನೀಡಿ ಮಾತುಕತೆ ನಡೆಸಲಾಗಿದೆ. ಅವರನ್ನು ಸ್ವಾಗತಿಸುವ ಪಟ್ಟಿಯಲ್ಲಿ ನನ್ನ ಹೆಸರಿತ್ತು. ನಿನ್ನೆ ಲಸಿಕಾ ಅಭಿಯಾನದಲ್ಲಿ ನಾನು ಪಾಲ್ಗೊಂಡಿದ್ದರಿಂದ ಅಲ್ಲಿಗೆ ಹೋಗಲಾಗಲಿಲ್ಲ. ಹಾಗಾಗಿ ಇಂದು ಬೆಳಗ್ಗೆ ಅವರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ ಲಸಿಕೆ ಅಭಿಯಾನ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಅಮಿತ್ ಷಾ ಚರ್ಚೆ ನಡೆಸಿದರೆಂದು ತಿಳಿಸಿದರು.
ಸಚಿವ ಸ್ಥಾನ ಸಿಗದವರ ಅಸಮಾಧಾನದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಈ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನು ಮುಖ್ಯಮಂತ್ರಿಗಳನ್ನು ಕೇಳಬೇಕು ಎಂದರು.