ಬಡ ಮಕ್ಕಳಿಗೆ ಉಚಿತ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ : ಸಚಿವ ಸುಧಾಕರ್

Social Share

ಬೆಂಗಳೂರು, ಫೆ.15 : ಕ್ಯಾನ್ಸರ್ ಗೊಳಗಾದ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯ. ಆದ್ದರಿಂದ ಬಡ ಕುಟುಂಬಗಳಲ್ಲಿ ಕ್ಯಾನ್ಸರ್ ಗೊಳಗಾದ ಮಕ್ಕಳಿಗಾಗಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು ಉಚಿತವಾಗಿ ಲಭ್ಯವಾಗಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ ಅಂಗವಾಗಿ ದಾನಿ ರಾಜಶೇಖರ್ ಅವರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿರುವ ಮೆಡಿಕಲ್ ಐಸಿಯುಗೆ ಭೂಮಿ ಪೂಜೆಯನ್ನು ಸಚಿವ ಡಾ.ಕೆ.ಸುಧಾಕರ್ ನೆರವೇರಿಸಿದರು. ಬಳಿಕ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಸೌಲಭ್ಯಕ್ಕೆ ಸಚಿವರು ಚಾಲನೆ ನೀಡಿದರು.
ನಂತರ ಮಾತನಾಡಿ, ಮಕ್ಕಳು ಸದಾ ಆರೋಗ್ಯದಿಂದ ಇರಬೇಕು. ಕ್ಯಾನ್ಸರ್ ಗೆ ತುತ್ತಾದ ಮಕ್ಕಳಿಗೆ ಸರ್ಕಾರ ಅತ್ಯುತ್ತಮ ಚಿಕಿತ್ಸೆ ನೀಡಲಿದೆ. ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸರ್ಕಾರ, ರಾಜ್ಯವನ್ನು ಆರೋಗ್ಯ ಕರ್ನಾಟಕ ಮಾಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ಬಡವರಿಗೆ ಕೈಗೆಟುಕದ ಚಿಕಿತ್ಸೆಯಾಗಿದೆ. ಹೀಗಾಗಿ ಸರ್ಕಾರ ಇದನ್ನು ಉಚಿತವಾಗಿ ಸಿಗುವಂತೆ ಮಾಡಲು ಕ್ರಮ ಕೈಗೊಂಡಿದೆ. ಈಗ ಇಬ್ಬರು ಮಕ್ಕಳಿಗೆ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಕಿದ್ವಾಯಿ ಸಂಸ್ಥೆಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಬರುತ್ತಾರೆ. ಹೀಗಾಗಿ ಈ ಸಂಸ್ಥೆಯ ಮೇಲೆ ಒತ್ತಡ ಹೆಚ್ಚಿದೆ. ಇದನ್ನು ಕಡಿಮೆ ಮಾಡಲು ಸರ್ಕಾರ ಕಿದ್ವಾಯಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ. ಈಗಾಗಲೇ ತುಮಕೂರು, ಕಲಬುರ್ಗಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕಿದ್ವಾಯಿ ಸಂಸ್ಥೆಯ ಪ್ರಾದೇಶಿಕ ಕೇಂದ್ರಗಳಿವೆ. ಈ ವರ್ಷ ಬೆಳಗಾವಿಯಲ್ಲೂ ಆರಂಭವಾಗಲಿದೆ ಎಂದು ಹೇಳಿದರು.
ವಿಶ್ವದಲ್ಲೇ ಮಕ್ಕಳ ಕ್ಯಾನ್ಸರ್ ದೊಡ್ಡ ಕಾಯಿಲೆ ಆಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಿನವರು ಗುಣಮುಖರಾಗುತ್ತಾರೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹಲವು ಕಾರಣಗಳಿಂದ ಕ್ಯಾನ್ಸರ್ ಪೀಡಿತರು ಗುಣಮುಖರಾಗುತ್ತಿಲ್ಲ. ಸರಿಯಾದ ಸಮಯದಲ್ಲಿ ಕಾಯಿಲೆ ಪತ್ತೆ ಆಗದೇ ಇರುವುದು, ಸರಿಯಾದ ಚಿಕಿತ್ಸೆ ದೊರೆಯದೇ ಇರುವುದು ಕ್ಯಾನ್ಸರ್ ಪೀಡಿತರಿಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.
ಕೋವಿಡ್ ಬಗ್ಗೆ ಎಚ್ಚರದಿಂದ ಇರಬೇಕು. ಸರ್ಕಾರ ವಿಶ್ವದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗಮನ ಇಟ್ಟಿದೆ. ಆದರೆ ಎಲ್ಲರೂ 2 ಡೋಸ್ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿದರು.ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಈ ಬಾರಿ ತಮ್ಮ ಆರ್ಥಿಕ ಶಿಸ್ತು ಮತ್ತು ಆರ್ಥಿಕ ನೀತಿಯ ಜ್ಞಾನದ ಮೂಲಕ ಅತ್ಯುತ್ತಮ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Articles You Might Like

Share This Article