ಜನರನ್ನು ಮರಳು ಮಾಡಲು ಕಾಂಗ್ರೆಸ್ ಬೀದಿ ನಾಟಕ : ಸುಧಾಕರ್ ಟೀಕೆ

Social Share

ಬೆಂಗಳೂರು,ಜ.9- ಕಾನೂನು ಧಿಕ್ಕರಿಸಿ, ತುರ್ತು ಆರೋಗ್ಯದ ಸಂದರ್ಭದಲ್ಲೂ ಜನರನ್ನು ಮರಳು ಮಾಡಲು ಕಾಂಗ್ರೆಸ್ ಪಾದಯಾತ್ರೆ ಮೂಲಕ ದೊಡ್ಡ ನಾಟಕ ಮಾಡುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟೀಕಿಸಿದ್ದಾರೆ. ಆರು ವರ್ಷಗಳ ಕಾಲ ಅಕಾರದಲ್ಲಿದ್ದ ಅವರು ಡಿಪಿಆರ್ ಸಿದ್ದಪಡಿಸಲು ಐದು ವರ್ಷ ತೆಗೆದುಕೊಂಡರು.
ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಸಭೆಗಳನ್ನು ನಡೆಸಿ ಅಂತಿಮ ಹಂತಕ್ಕೆ ತಂದಿದ್ದಾರೆ.ಇನ್ನೇನು ಕೆಲವೇ ದಿನದಲ್ಲಿ ಇದು ಆರಂಭವಾಗುತ್ತದೆ ಎಂದು ಅರಿತು ಕಾಂಗ್ರೆಸ್‍ನವರು ದೊಡ್ಡ ನಾಟಕವಾಡುತ್ತಿದ್ದಾರೆ.
ಮುಂಬರುವ ಬಿಬಿಎಂಪಿ ಚುನಾವಣೆವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸಲು ನಡೆಸುತ್ತಿರುವ ಈ ಪಾದಯಾತ್ರೆಯನ್ನು ಯುವಕರು, ಸುಶಿಕ್ಷಿತ ಜನರು, ಸಾರ್ವಜನಿಕರು ಛೀಮಾರಿ ಹಾಕುತ್ತಾರೆ ಎಂದು ಟೀಕಿಸಿದ್ದಾರೆ.
ಈ ಪಾದಯಾತ್ರೆಗೆ ಪಾಲ್ಗೊಂಡು ಆರೋಗ್ಯ ಸಮಸ್ಯೆಗೆ ಎದುರಾಗುವವರಿಗೆ ನನ್ನ ಸಹಾನುಭೂತಿಯಿದೆ. ಅವರ ಆರೋಗ ಕಾಪಾಡುವ ದೃಷ್ಟಿಯಿಂದ ಆರೈಕೆ ಮಾಡಲು ಸರ್ಕಾರ ಕಾಳಜಿ ವಹಿಸಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ಕೊರೊನಾ ಸೋಂಕಿತರ ಸಂಖ್ಯೆಯನ್ನು ಏರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳುತ್ತಾರೆ. ಆದರೆ ಅವರ ನೆರೆಯ ಮಹಾರಾಷ್ಟ್ರದಲ್ಲಿ ಅವರ ಸರ್ಕಾರವಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಅಲ್ಲಿ ದಾಖಲಾಗುತ್ತಿದೆ. ಇದನ್ನು ಅವರೇ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜವಾಬ್ದಾರಿಯುತ ವಿಪಕ್ಷವಾಗಿ ಅವರು ಸರ್ಕಾರದ ಜೊತೆ ಕೈ ಜೋಡಿಸಬೇಕಿತ್ತು. ಆದರೆ ಅವರು ಅದನ್ನು ಮರೆತು ಜನರನ್ನು ಮರಳು ಮಾಡುವ ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ನಾಟಕವಾಗುತ್ತಿದೆ ಎಂದು ಆರೋಪಿಸಿದರು.

Articles You Might Like

Share This Article