ಬೆಂಗಳೂರು,ಜ.8- ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದಿದ್ದರೆ ವಿರೋಧ ಪಕ್ಷ ಕಾಂಗ್ರೆಸ್‍ಗೆ ಜನರೇ ಛೀಮಾರಿ ಹಾಕುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಅಲ್ಲಿನ ಸರ್ಕಾರಗಳು ಜಾರಿಗೆ ತಂದ ನಿಯಮಗಳಿಗೆ ವಿರೋಧ ಪಕ್ಷಗಳು ಸಂಪೂರ್ಣ ಬೆಂಬಲ ನೀಡಿವೆ. ಆದರೆ ನಮ್ಮಲ್ಲಿ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು.
ಕಾಂಗ್ರೆಸ್‍ನವರು ಪಾದಯಾತ್ರೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರು ಪಾದಯಾತ್ರೆಯನ್ನಾದರೂ ಮಾಡಲಿ, ಎತ್ತಿನ ಗಾಡಿಯಲ್ಲಾದರೂ ಹೋಗಲಿ, ಟ್ರಾಕ್ಟರ್, ಮ್ಯಾರಾಥಾನ್, ಕುದುರೆ ರೇಸ್, ರೈಲು, ಸೈಕಲ್, ಬಸ್ ಸೇರಿದಂತೆ ಆರೋಗ್ಯಕ್ಕೆ ಒಳೆಯದಾದರೆ ಯಾವುದರಲ್ಲಾದರೂ ಬರಲಿ ಎಂದು ವ್ಯಂಗ್ಯವಾಡಿದರು.
ಅವರಿಗೆ ಆರೋಗ್ಯ ಸುಧಾರಣೆಯಾಗುತ್ತದೆ ಎಂದರೆ ನಾವು ಖಂಡಿತವಾಗಿಯೂ ವಿರೋಸುವುದಿಲ್ಲ. ಆದರೆ ಈಗ ಕೋವಿಡ್ ಸಮಯವಾಗಿರುವುದರಿಂದ ನಿಯಮಗಳನ್ನು ಉಲ್ಲಂಘಿಸಿ ಪಾದಯಾತ್ರೆ ಮಾಡುವುದು ಯಾರಿಗಾದರೂ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ಮುಂದೆ ನೀವು ಆಡಳಿತ ನಡೆಸಲು ಬಂದಾಗ ನೀವೆ ರೂಪಿಸಿದ ಸರ್ಕಾರಗಳನ್ನು ಉಲ್ಲಂಘನೆ ಮಾಡಿದರೆ ಆವಾಗ ಪ್ರತಿಕ್ರಿಯೆ ಏನಿರುತ್ತದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಡೆದುಕೊಳ್ಳುವ ರೀತಿ ಇದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಸೇರಿದಂತೆ ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು ವಿದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಎರಡುಮೂರು ವಾರ ಬಿಟ್ಟು ಭಾರತದಲ್ಲಿ ಹೆಚ್ಚಾಯಿತು. ಈಗ ಮಹಾರಾಷ್ಟ್ರ ಮತ್ತು ಕೇರಳದ ನಂತರ ನಮ್ಮಲ್ಲೂ ಏರಿಕೆಯಾಗುತ್ತದೆ ಎಂದು ಹೇಳಿದರು.
ಸರ್ಕಾರ ಕೋವಿಡ್ ಪ್ರಕರಣಗಳಲ್ಲಿ ಸುಳ್ಳು ಹೇಳುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಅವರಿಗೆ ಮಾಹಿತಿ ಕೊರತೆ ಇದೆ. ನಾವು ಯಾವ ಮಾಹಿತಿಯನ್ನೂ ಮುಚ್ಚಿಟ್ಟಿಲ್ಲ. ಪ್ರತಿಯೊಂದು ಮಾಹಿತಿಯನ್ನೂ ನಾವು ಅಂಕಿಸಂಖ್ಯೆ ಸಮೇತ ನೀಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ನಾನು ಯಾರ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಶಿವಕುಮಾರ್ ಅವರಿಗೆ ಮಾಹಿತಿ ಕೊರತೆ ಇರುವುದರಿಂದ ಈ ರೀತಿ ಹೇಳಿರುವುದು ಅವರ ಅಜ್ಞಾನವನ್ನು ತಿಳಿಸುತ್ತದೆ ಎಂದು ವ್ಯಂಗ್ಯವಾಡಿದರು.
ನಿನ್ನೆ ಬೆಂಗಳೂರಿನಲ್ಲಿ ಪಾಸಿವಿಟಿ ದರ ಶೇ.7.8ರಷ್ಟಿತ್ತು. ದಿನದಿಂದ ದಿನಕ್ಕೆ ದೈನಂದಿನ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನದಲ್ಲಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಬೆಂಗಳೂರು ಹೊರತುಪಡಿಸಿ ಐದಾರು ಜಿಲ್ಲೆಗಳಲ್ಲಿ ಕೋವಿಡ್ ಪಾಸಿವಿಟಿ ದರ ಹೆಚ್ಚುತ್ತಿದೆ. ಒಂದು ಮತ್ತು 2ನೇ ಅಲೆಯಲ್ಲಿ ನಾವು ಸಾಕಷ್ಟು ಕಹಿ ಅನುಭವ ಎದುರಿಸಿದ್ದೇವೆ. ಏಕಾಏಕಿ ಸೋಂಕು ಹೆಚ್ಚಳವಾದರೆ ತಡೆಗಟ್ಟಲು ಸಾಧ್ಯವಾಗುವುದಿಲ್ಲ.
ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಸರ್ಕಾರ ಇಂತಹ ಕ್ರಮವನ್ನು ತೆಗೆದುಕೊಂಡಿದೆ. ಎಲ್ಲರೂ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ. ನಾವು ಮಾಡಿರುವುದು ವಾರಾಂತ್ಯದ ಕಫ್ರ್ಯೂ ಮಾತ್ರ. ಇದು ಸಂಪೂರ್ಣ ಲಾಕ್‍ಡೌನ್ ಅಲ್ಲ. ಆದರೂ ಕೆಲವರು ಇದರಲ್ಲೂ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಸುಧಾಕರ್ ಕಿಡಿಕಾರಿದರು.
