ಬೆಂಗಳೂರು,ಜು.30- ಮಾಜಿ ಸ್ಪೀಕರ್ ರಮೇಶ್ಕುಮಾರ್ ಸೆಲ್ ಗೋಲ್ ಹೊಡೆದು ತಮ್ಮ ರಾಕ್ಷಸ ರಾಜಕಾರಣ ನಿಜ ಸ್ವರೂಪವನ್ನು ಬಿಚ್ಚಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಗದ್ದಲದ ಕಾರ್ಯಕ್ರಮಗಳನ್ನು ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ದೈಹಿಕ ಹಲ್ಲೆ ನಡೆಸಿದ ರಮೇಶ್ಕುಮಾರ್ ವರ್ತನೆಗೆ ಪ್ರತಿಕ್ರಿಯಿಸಿದ ಅವರು, ರಮೇಶ್ ಕುಮಾರ್ ಅವರ ಅಶಿಸ್ತಿನ ನಡವಳಿಕೆಗೆ ಯಾವುದೇ ಮಿತಿಯಿಲ್ಲ ಎಂಬಂತೆ ತೋರುತ್ತಿದೆ ಎಂದರು.
ತಮ್ಮ ವೃತ್ತಿ ಜೀವನದಲ್ಲಿ ಎರಡು ಬಾರಿ ಕರ್ನಾಟಕದ ಸ್ಪೀಕರ್ ಸ್ಥಾ£ ಅಲಂಕರಿಸಿದ ಈ ಮಹಾನುಭಾವರು ಸಾರ್ವಜನಿಕ ಜೀವನದಲ್ಲಿ ಕೊಳಕು ನಾಲಿಗೆಯ ಮತ್ತು ಅಶಿಸ್ತಿನ ಉಪದ್ರವಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.
ರಮೇಶ್ ಕುಮಾರ್ ಅವರು ಮಾಧ್ಯಮದವರ ಮೇಲಿನ ಹಲ್ಲೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಮತ್ತು ಮಾಧ್ಯಮ ಬಂಧುಗಳಿಗೆ ನನ್ನ ಸಹಾನುಭೂತಿ ಮತ್ತು ನೈತಿಕ ಬೆಂಬಲವಿದೆ ಎಂದು ಹೇಳಿದರು. ಕೆಲವು ವರ್ಷಗಳ ಹಿಂದೆ ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿಯೊಂದರ ಸ್ಟುಡಿಯೋಗೆ ನುಗ್ಗಿದ್ದ ಅವರು, ಕೈಯಲ್ಲಿ ಶೂ ಹಿಡಿದುಕೊಂಡು ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದರು.
ನಮ್ಮ ಕಾಲದ ಅತ್ಯಂತ ದುರದೃಷ್ಟಕರ ವಿರೋಧಾಭಾಸ ಎಂದರೆ ರಾಜ್ಯದ ಅತ್ಯಂತ ಪೂಜ್ಯ ರಾಜಕಾರಣಿಗಳಲ್ಲಿ ಒಬ್ಬರ ನೈತಿಕ ಅವನತಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ ಪಕ್ಷದ ಮೇಧಾವಿ ನಾಯಕ ರಮೇಶ್ ಕುಮಾರ್ ಅವರು ಇಂದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಮೂಲಕ ತಾವೊಬ್ಬ ಗೋಮುಖ ವ್ಯಾಘ್ರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ರಮೇಶ್ಕುಮಾರ್ ಅವರ ಈ ದುರ್ನಡತೆಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ರಮೇಶ್ ಕುಮಾರ್ ವಿರುದ್ಧ ಎಚ್ಡಿಕೆ ಕಿಡಿ
ಬೆಂಗಳೂರು, ಜು.30- ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಕೋಲಾರದಲ್ಲಿ ಮಾಧ್ಯಮ ಪ್ರತಿನಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದ್ದಾರೆ.
ಸಂವಿಧಾನದ 4ನೇ ಅಂಗ ಮಾಧ್ಯಮ ಎನ್ನುವುದು ಸ್ವಯಂ ಘೋಷಿತ ಸಂವಿಧಾನ ಪಂಡಿತರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ ಎಂದು ಟೀಕಿಸಿದ್ದಾರೆ. ನಾಲಿಗೆ ಮೇಲೆ ನಿಯಂತ್ರಣ ಇಲ್ಲದ ವ್ಯಕ್ತಿ, ಕಲಾಪದಲ್ಲೇ ಮಹಿಳೆಯರ ಬಗ್ಗೆ ಕೊಳಕು ಕಕ್ಕಿದ ಆಸಾಮಿ, ಸ್ವಾತಂತ್ರೋದ್ಯಾನವನದಲ್ಲಿ ನಾಯಕರ ಸಾಕ್ಷಿಯಾಗಿ 3-4 ತಲೆಮಾರುಗಳಿಗಾಗುವಷ್ಟು ಲೂಟಿ ಹೊಡೆದ ಲೆಕ್ಕ ಕೊಟ್ಟ ವ್ಯಕ್ತಿಯ ಅಸಲಿರೂಪ ಅನಾವರಣವಾಗಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ.