ಬೆಂಗಳೂರು,ಜ.22- ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾದರೆ ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಸದ್ಯಕ್ಕೆ ಕೋವಿಡ್ ಸೋಂಕು ಕಾಣಿಸಿಕೊಂಡವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ತುಂಬಾ ಕಡಿಮೆ ಇದೆ. ಈ ತಿಂಗಳ ಅಂತ್ಯ ಹಾಗೂ ಫೆಬ್ರವರಿ 2ನೇ ವಾರದವರೆಗೂ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಜನರ ಆರೋಗ್ಯದಲ್ಲಿ ಏರು-ಪೇರು ಕಂಡರೆ ನಾವು ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಮತ್ತು ಎರಡನೇ ಅಲೆಗೆ ಹೋಲಿಸಿದರೆ ಮೂರನೆ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ನಮಗೆ ನೆಮ್ಮದಿ ತಂದಿರುವ ವಿಷಯ. ಬಹುತೇಕರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆ ಬೇಡಿಕೆ ಕಡಿಮೆಯಾಗಿದೆ ಎಂದು ತಿಳಿಸಿದರು.
ನಾನು ಈಗಲೂ ಜನರಲ್ಲಿ ಮನವಿ ಮಾಡುವುದೇನೆಂದರೆ ದಯವಿಟ್ಟು ಮನೆ ಬಿಟ್ಟು ತಿರುಗಾಡಬೇಡಿ. ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಯಾವುದೇ ನಿರ್ಬಂಧ ಹಾಕುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದರು.
ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‍ಡೌನ್ ಇಲ್ಲವೇ ನೈಟ್ ಕಫ್ರ್ಯು ವಿಸಬೇಕಾದ ಅಗತ್ಯವಿಲ್ಲ. ಪರಿಸ್ಥಿತಿ ಕೈ ಮೀರುವ ಮೊದಲು ಕೆಲವು ಸಂದರ್ಭಗಳಲ್ಲಿ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಿಂದಿನ ಒಂದು ಮತ್ತು ಎರಡನೇ ಅಲೆಗೆ ಹೋಲಿಸಿದರೆ ಈ ಬಾರಿ ಕೇವಲ ಎರಡೇ ವಾರದಲ್ಲಿ ನಾವು ವಾರಾಂತ್ಯ ಲಾಕ್‍ಡೌನ್ ತೆರವುಗೊಳಿಸಿದ್ದೇವೆ. ಇದು ಜನರಿಗಾಗಿ ತೆಗೆದುಕೊಂಡಿರುವ ಕ್ರಮ ಎಂದು ಸಚಿವರು ಸಮರ್ಥಿಸಿಕೊಂಡರು.
ಆಸ್ಪತ್ರೆಗಳಲ್ಲಿ ಬೆಡ್, ಐಸಿಯು, ಆಕ್ಸಿಜನ್, ಲಸಿಕೆ, ಮಾತ್ರೆ ಯಾವುದರಲ್ಲೂ ಸಮಸ್ಯೆ ಇಲ್ಲ. ಜನರಿಗೆ ಇದರ ಬಗ್ಗೆ ಅರಿವು ಮೂಡಿರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಮಾಧಾನಕರ ವಿಷಯ ಎಂದರು.
ಜನರ ಕೈಯಲ್ಲೇ ಎಲ್ಲವೂ ಇದೆ. ಜವಾಬ್ದಾರಿ ಅರಿತು ನೀವು ನಡೆದುಕೊಂಡರೆ ಸರ್ಕಾರ ಬಿಗಿಯಾದ ನಿಲುವುಗಳನ್ನು ತೆಗೆದುಕೊಳ್ಳುವ ಅಗತ್ಯ ಉದ್ಭವಿಸುವುದಿಲ್ಲ. ಲಾಕ್‍ಡೌನ್ ತೆರವುಗೊಳಿಸಿದೆ ಎಂದು ಮನಸೋಇಚ್ಚೆ ಜನಜಂಗುಳಿ ಸೇರುವುದು ಬೇಡ. ಮುಂದೆ ಅಂತಹ ಪರಿಸ್ಥಿತಿ ಬಂದರೆ ಜನತೆಯೇ ಹೊಣೆ ಎಂದು ಎಚ್ಚರಿಕೆ ಕೊಟ್ಟರು.
ಎಲ್ಲಾ ರಾಜ್ಯಗಳಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಕರ್ನಾಟಕವೂ ಹೊರತಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದಯವಿಟ್ಟು ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತಹ ಪರಿಸ್ಥಿತಿಗೆ ಅವಕಾಶ ಕಲ್ಪಿಸಬೇಡಿ ಎಂದು ಸುಧಾಕರ್ ಮನವಿ ಮಾಡಿದರು.
ನಿನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಜ್ಞರು, ವೈದ್ಯರು ಹಾಗೂ ಸಚಿವರ ಬಳಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಲಾಕ್‍ಡೌನ್‍ನಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ನಾವು ಸಾಕಷ್ಟು ಅಳೆದು ತೂಗಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಇದನ್ನು ಉಳಿಸಿಕೊಳ್ಳುವುದು ಬಿಡುವುದು ಜನರ ಕೈಯಲ್ಲಿದೆ ಎಂದರು.
ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಅದು ವೈಜ್ಞಾನಿಕ ತಳಹದಿಯ ಮೇಲೆ ಇರುತ್ತದೆ. ತಜ್ಞರು ನೀಡುವ ಶಿಫಾರಸುಗಳ ಮೇಲೆ ಸರ್ಕಾರ ನಿರ್ಣಯ ಮಾಡುತ್ತದೆ. ನಿನ್ನೆ ತೆಗೆದುಕೊಂಡಿರುವ ತೀರ್ಮಾನವು ಅತ್ಯಂತ ಸಮತೋಲನದಿಂದ ಕೂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಅಗತ್ಯವಿಲ್ಲ ಎಂದು ಐಸಿಎಂಆರ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅದರಂತೆ ನಿನ್ನೆ ಸರ್ಕಾರ ಪರಿಷ್ಕøತ ಮಾರ್ಗಸೂಚಿ ಹೊರಡಿಸಿದೆ. ಯಾರಿಗೆ ಸೋಂಕಿನ ಲಕ್ಷಣಗಳು ಇರುತ್ತದೋ ಅಂತಹವರಿಗೆ ಮಾತ್ರ ಕೋವಿಡ್ ಟೆಸ್ಟ್ ನಡೆಸಲು ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಚಿವ ಸಂಪುಟ ಪುನಾರಚನೆ ಕುರಿತಾಗಿ ಶಾಸಕರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಕೋವಿಡ್‍ನಿಂದ ಆಚೆ ಬಂದಿಲ್ಲ. ರಾಜಕೀಯದಲ್ಲಿ ಏನು ನಡೆಯುತ್ತಿದೆಯೋ ಎಂಬ ಮಾಹಿತಿ ಇಲ್ಲ ಎಂದು ಸಚಿವರು ನುಣುಚಿಕೊಂಡರು.
