ಕಬಿನಿ ಜಲಾಶಯ ಭರ್ತಿ, ಪ್ರವಾಹ ಭೀತಿ, ಮುನ್ನೆಚ್ಚರಿಕೆಗೆ ಸೂಚನೆ

Social Share

ನಂಜನಗೂಡು, ಜು.12- ಕೇರಳದ ವೈನಾಡು ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿರುವುದ ರಿಂದ ಜಲಾಶಯ ಭರ್ತಿಯಾದ ಕಾರಣ ಕಬಿನಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ಅಧಿಕವಾಗಿ ನೀರು ನದಿಗೆ ಬಿಡಲಾಗಿದೆ. ಪ್ರವಾಹ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಪಿಲಾ ನದಿಯ ಇಕ್ಕೆಲಗಳಲ್ಲಿ ತಹಸೀಲ್ದಾರ್ ಶಿವಮೂರ್ತಿ ಮಾರ್ಗದರ್ಶನದಲ್ಲಿ ನೀರಾವರಿ ಮತ್ತು ಪೋಲೀಸ್ ಅಧಿಕಾರಿಗಳಿಂದ ಬ್ಯಾರಿಕೇಟ್‍ಗಳನ್ನು ಅಳವಡಿಸುವ ಮೂಲಕ ಬಂದೋಬಸ್ತ್ ಮಾಡಲಾಗಿದೆ.

ಬತ್ತಿಹೋಗಿದ್ದ ಕಪಿಲಾ ನದಿಯು ಸತತ ಮಳೆಯಿಂದ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿರುವ ಐತಿಹಾಸಿಕ ಹದಿನಾರು
ಕಾಲು ಮಂಟಪ ಮತ್ತು ಪರಶುರಾಮ ದೇವಸ್ಥಾನಗಳು ಮುಳುಗುವ ಹಂತದಲ್ಲಿದ್ದು ಅಕ್ಕಪಕ್ಕದ ದೇವಾಲಯಗಳ ಸಮೀಪ ನೀರು ತಲುಪಿರುತ್ತದೆ.

ಪ್ರವಾಹದ ಮುನ್ನೆಚ್ಚರಿಕೆ ಸಲುವಾಗಿ ಶಾಸಕ ಬಿ.ಹರ್ಷವರ್ಧನ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರ ಫಲವಾಗಿ ರೆವಿನ್ಯೂ, ನೀರಾವರಿ ಪೊಲೀಸ್ ಅಧಿಕಾರಿಗಳು ಪ್ರವಾಹದ ಭೀತಿ ಎದುರಿಸುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಸಂಪೂರ್ಣ ಬಂದೋಬಸ್ತ್ ಮಾಡಿದ್ದಾರೆ.

ಕೃಷಿ ಭೂಮಿ ಜಲಾವೃತ: ಕಪಿಲಾ ನದಿಯ ಪಾತ್ರದಲ್ಲಿರುವ ತಾಲ್ಲೂಕಿನ ಬಹಳಷ್ಟು ಕೃಷಿ ಭೂಮಿ ಜಲಾವೃತಗೊಂಡಿದ್ದು, ರೈತರ ಕೃಷಿ ಚಟುವಟಿಕೆಗಳು ಸ್ಧಗಿತಗೊಂಡಿವೆ. ಕಪಿಲಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಿರುವುದ ರಿಂದ ಸಾರ್ವಜನಿಕರು ಮತ್ತು ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳು ಸ್ನಾನ ಅಥವಾ ಇತರೆ ಚಟುವಟಿಕೆಗಳಿಗೆ ನದಿಗೆ ಇಳಿಯದಂತೆ ತಹಸೀಲ್ದಾರ್ ಸೂಚಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಧ್ವನಿ ವರ್ಧಕಗಳ ಮೂಲಕವೂ ಮುಂಜಾಗ್ರತೆ ಬಗ್ಗೆ ಎಚ್ಚರಿಕೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Articles You Might Like

Share This Article