ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಇನ್ನಿಲ್ಲ, ಗಣ್ಯರ ಸಂತಾಪ

Social Share

ಬೆಂಗಳೂರು,ಫೆ.5-ಪ್ರವಚನ, ಸಂವಾದಗಳ ಮೂಲಕ ಭಾವೈಕ್ಯತೆ ಸಂದೇಶಗಳನ್ನು ಸಾರುತ್ತಿದ್ದ ಕನ್ನಡದ ಕಬೀರ ಎಂದೇ ಪ್ರಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ್(76) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ ಹೃದಯಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದವರಾದ ಇಬ್ರಾಹಿಂ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಬ್ರಾಹಿಂ ಅವರ ಅಂತ್ಯಕ್ರಿಯೆ ಇಂದು ಮಹಾಲಿಂಗಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಇಬ್ರಾಹಿಂ ಸುತಾರ್ ಅವರು ನಾಡಿನ ಎಲ್ಲೆಡೆ ತಮ್ಮ ಪ್ರವಚನಗಳ ಮೂಲಕ ಭಾವೈಕ್ಯತೆಯ ಸಂದೇಶ ಸಾರಿ ಪ್ರಸಿದ್ದಿಯಾಗಿದ್ದರು. ಧರ್ಮ, ಸೂಫಿ ಪರಂಪರೆಗಳ ಪ್ರವಚನಗಳ ಮೂಲಕ ಸಾಮರಸ್ಯಕ್ಕಾಗಿ ಅವರು ಶ್ರಮಿಸಿದ್ದರು.
ಹಿಂದು, ಮುಸ್ಲಿಂ ಭಾವೈಕತಾ ಶ್ರೇಷ್ಠ ಪ್ರವಚಕ, ಸೂಫಿ ಸಂತರಾಗಿದ್ದ ಸುತಾರ್‍ಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ಯೋತ್ಸವ ಪ್ರಶಸ್ತಿ, ಅಸಮಾನ್ಯ ಕನ್ನಡಿಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಇಬ್ರಾಹಿಂ ಸುತಾರ್ ಅವರ ಮಾತುಗಳು, ಹಾಡುಗಳು ಎಂಥವರನ್ನು ಸೆಳೆಯುತ್ತಿತ್ತು. ಅವರ ಸ್ಪಷ್ಟವಾದ ಉಚ್ಛಾರಣೆ, ಭಾವೈಕ್ಯತೆಯ ಸಂದೇಶಗಳು ಕೇಳುಗರ ಮನಸೂರೆಗೊಳ್ಳುತ್ತಿದ್ದವು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗಿವೆ.
ಸಂತಾಪ: ಇಬ್ರಾಹಿಂ ಸುತಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಗೋವಿಂದ ಕಾರಜೋಳ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.  ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಅವರು ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.

Koo App

”ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ‌. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” : ಮುಖ್ಯಮಂತ್ರಿ @BSBommai

CM of Karnataka (@CMOKarnataka) 5 Feb 2022

Koo App

ಸರ್ವಧರ್ಮ ಭಾವೈಕ್ಯತೆಯ ಸಂದೇಶ ಸಾರಿದ ಸೂಫಿ ಸಂತ, ತತ್ವಪದಕಾರರು, ಪ್ರವಚನಕಾರರು, ಪದ್ಮಶ್ರೀ ವಿಜೇತ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅನುಯಾಯಿಗಳು, ಕುಟುಂಬ ವರ್ಗ ಹಾಗೂ ಹಿತೈಷಿಗಳಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 5 Feb 2022

Koo App

ಕನ್ನಡದ ಕಬೀರ ಎಂದೇ ಖ್ಯಾತರಾಗಿದ್ದ ಸರ್ವ ಧರ್ಮ ಸಮನ್ವಯ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಸಮಾಜದಲ್ಲಿ ಸಮಾನತೆಯನ್ನು ಸಾರಲು ಅವರು ಶ್ರಮಿಸಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #IbrahimSutara

Araga Jnanendra (@aragajnanendra) 5 Feb 2022

Koo App

ಖ್ಯಾತ ಪ್ರವಚನಕಾರರು, ಆಧ್ಯಾತ್ಮಿಕ ಚಿಂತಕರು, ಸರ್ವಧರ್ಮ ಪ್ರಚಾರಕರು ಪದ್ಮಶ್ರೀ ಇಬ್ರಾಹಿಮ್ ಸುತಾರ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಕುಟುಂಬ ವರ್ಗಕ್ಕೆ ಹಾಗೂ ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. #ಓಂಶಾಂತಿ

B Sriramulu (@sriramulubjp) 5 Feb 2022

Articles You Might Like

Share This Article