ಉಪ್ಪಿಯ `ಕಬ್ಜ’ ಚಿತ್ರಕ್ಕೆ ಶಿವಣ್ಣ ಚಾಲನೆ

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಸ್ಟಾರ್ ನಿರ್ದೇಶಕ ಆರ್.ಚಂದ್ರು ಕಾಂಬಿನೇಷನ್‍ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅದ್ಧೂರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ ಚಾಲನೆ ದೊರೆಯಿತು. ಈ ಹಿಂದೆ ಬ್ರಹ್ಮ, ಐ ಲವ್ ಯು ಚಿತ್ರಗಳ ಯಶಸ್ಸಿನ ನಂತರ ಮತ್ತೊಮ್ಮೆ ಇವರಿಬ್ಬರ ಸಮಾಗಮದಲ್ಲಿ ಸೆಟ್ಟೇರುತ್ತಿರುವ ಈ ಕಬ್ಜ ಚಿತ್ರ ಏಳು ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಚಿತ್ರದ ಫಸ್ಟ್ ಲುಕ್‍ಅನ್ನು ಆನಂದ ಗುರೂಜಿ
ಲೋಕಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಉಪೇಂದ್ರ ಪಿಸ್ತೂಲ್ ಹಿಡಿದು ಎಂಭತ್ತರ ದಶಕದ ಡಾನ್ ಆಗಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಯು.ಟಿ.ಖಾದರ್, ಸೌಂದರ್ಯ ಜಗದೀಶ್, ವಿತರಕ ಮೋಹನ್‍ಕುಮಾರ್, ಕೆ.ವಿ. ನಾಗೇಶ್‍ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು. ಮೊದಲು ಮಹರ್ಷಿ ಆನಂದ್ ಗುರೂಜಿ ಮಾತನಾಡಿ, ಕಬ್ಜ ಸಿನಿಮಾದ ಹೆಸರೇ ಅರ್ಥಗರ್ಭಿತವಾಗಿದೆ. ಆರ್. ಚಂದ್ರು ಹಿಂದೆ ಮಾಡಿರುವ ಎಲ್ಲ ಸಿನಿಮಾಗಳು ತುಂಬಾ ವಿಶೇಷವಾಗಿದ್ದು, ಈ ಚಿತ್ರವೂ ಪ್ರೇಕ್ಷಕರಿಗೆ ಮೆಚ್ಚುಗೆಯಾಗಲಿದೆ. ಹಾಗೆಯೇ ಉಪೇಂದ್ರ ಅವರ ಚಿತ್ರಗಳು ಕೂಡ ಸಮಾಜಕ್ಕೆ ಸಂದೇಶ ನೀಡಿವೆ. ಈ ಚಿತ್ರವು ಶಾರದೆಯ ಆಶೀರ್ವಾದದೊಂದಿಗೆ ಯಶಸ್ವಿಯಾಗಲಿ ಎಂದು ಹೇಳಿದರು.

ನಂತರ ನಿರ್ದೇಶಕ ಆರ್.ಚಂದ್ರು ಮಾತನಾಡಿ, ಚಿತ್ರದ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡುತ್ತೇವೆ. ಏಳು ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಮಾಡುವುದೇ ನನ್ನ ಗುರಿ. ಉತ್ತರ ಭಾರತದ ಕೆಲ ದೊಡ್ಡ ಕಂಪೆನಿಗಳ ಜೊತೆ ಮಾತನಾಡಿದ್ದೇನೆ.

ನನ್ನ ಹಿಂದಿನ ಚಿತ್ರಗಳ ಬಗ್ಗೆ ಗೊತ್ತಿರೋದ್ರಿಂದ ದಕ್ಷಿಣದವರಿಗೆ ಈ ಚಿತ್ರದ ಬಗ್ಗೆ ಅಪಾರ ನಂಬಿಕೆ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಒಂದು ದೊಡ್ಡ ತಂಡವೇ ಚಿತ್ರದ ಹಿಂದೆ ಕೆಲಸ ಮಾಡುತ್ತಿದೆ. ಭೂಗತ ಲೋಕದ ಕಥೆಯನ್ನು ಉಪ್ಪಿ ಈಗಾಗಲೇ ಮಾಡಿಬಿಟ್ಟಿದ್ದಾರೆ. ಅದನ್ನು ನಾವು ಬೀಟ್ ಮಾಡೋಕಾಗಲ್ಲ, ಬೇರೆ ರೀತಿಯ ಇನ್ನೊಂದು ಕಥೆಯನ್ನು ಕಟ್ಟಿಕೊಡಲಿದ್ದೇವೆ.

ಈ ಚಿತ್ರವನ್ನು 4 ಹಂತದಲ್ಲಿ ಶೂಟ್ ಮಾಡುವ ಪ್ಲಾನ್ ಮಾಡಿಕೊಂಡಿದ್ದು, ಬೆಂಗಳೂರು, ವಾರಣಾಸಿ, ಮಧುರೈ ಹಾಗೂ ಬಾಂಬೆ ಸೇರಿದಂತೆ ಹಲವಾರು ಕಡೆ ಚಿತ್ರೀಕರಣ ಮಾಡುವ ಪ್ಲಾನ್ ಇದೆ. ಎಲ್ಲ ರಾಜ್ಯದ ಪ್ರೇಕ್ಷಕರಿಗೆ ಅನ್ವಯ ಆಗುವ ರೀತಿಯಲ್ಲಿ ಕಥೆ ಇರಲಿದೆ ಎಂದು ಹೇಳಿದರು. ನಟ ಉಪೇಂದ್ರ ಮಾತನಾಡಿ, ಆರ್. ಚಂದ್ರು ಅಂದರೆ ನನಗೆ ಹನುಮಂತ ನೆನಪಾಗುತ್ತಾರೆ. ತನಗೆ ಏನೂ ಗೊತ್ತಿಲ್ಲದಂತೆ ಇದ್ದರೂ ಎಲ್ಲ ವನ್ನೂ ಮಾಡಿರುತ್ತಾರೆ, ಅಷ್ಟೇ ತಿಳಿದಿಕೊಂಡಿದ್ದಾರೆ. ಈಗಿನ ತಲೆಮಾರಿನ ಚಿತ್ರದ ಹೊಸ ಮೇಕಿಂಗ್ ಈ ಚಿತ್ರದಲ್ಲಿದೆ.

ಏಜೆ ಶೆಟ್ಟಿ ಒಬ್ಬ ಪ್ರತಿಭಾನ್ವಿತ ಛಾಯಾಗ್ರಹಕ. ಈ ಚಿತ್ರದ ಫಸ್ಟ್‍ಲುಕ್‍ಅನ್ನು ಅದ್ಭುತವಾಗಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಈ ಹಿಂದೆ ಕಿಸ್ ಚಿತ್ರಕ್ಕೆ ವರ್ಕ್ ಮಾಡಿದ ಏಜೆ ಶೆಟ್ಟಿ ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಕಾಜಲ್ ಅಗರ್ವಾಲ್ ನಾಯಕಿಯಾಗಲಿದ್ದಾರೆ ಎಂಬ ಮಾತಿದ್ದು, ಅದಕ್ಕೆ ಪೂರಕವಾಗಿ ನಿರ್ದೇಶಕರು ಕೂಡ ಈ ನಟಿಯೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಹಾಗೆಯೇ ಬಾಲಿವುಡ್ ಹಾಗೂ ಟಾಲಿವುಡ್‍ನ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

ಇಡೀ ದೇಶದ ಗಮನ ಸೆಳೆಯುವ ಹಾದಿಯಲ್ಲಿ ಚಿತ್ರ ನಿರ್ಮಿಸುತ್ತೇವೆ. ದೊಡ್ಡ ಮಟ್ಟದ ಚಿತ್ರವಾಗಿ ಹೊರಬರಲಿದ್ದು, ನೈಜ ಘಟನೆ ಆಧರಿತವಾಗಿ ಕಬ್ಜ ಎಲ್ಲರನ್ನೂ ಆಕರ್ಷಿಸಲಿದೆ ಎಂದು ಚಿತ್ರತಂಡ ಹೇಳುತ್ತಿದೆ. ಒಟ್ಟಾರೆ ಅದ್ಧೂರಿಯಾಗಿ ಚಾಲನೆ ಪಡೆದಿರುವ ಚಿತ್ರ ಚಿತ್ರೀಕರಣಕ್ಕೆ ಹೊರಡಲು ಸನ್ನದ್ಧವಾಗಿದೆ.