ದೊಡ್ಡ ಗಣಪತಿ-ಬಸವನಿಗೆ ವಿಶೇಷ ಪೂಜೆ, ಈ ಬಾರಿ ಕಡಲೆಕಾಯಿ ಪರಿಷೆ ಇಲ್ಲ

ಬೆಂಗಳೂರು, ಡಿ.14- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆ ಕಾಯಿ ಪರಿಷೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಕಾರ್ತಿಕ ಕಡೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಗೆ ರಾಜ್ಯ, ಹೊರ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದರು.

ಕಡಲೆಕಾಯಿ ಪರಿಷೆಗೆ ಮೂರ್ನಾಲ್ಕು ದಿನಗಳ ಮುನ್ನವೇ ತಮಿಳುನಾಡು, ಆಂಧ್ರ, ಕೋಲಾರ, ಹೊಸಕೋಟೆ, ಮಾಗಡಿ ಮತ್ತಿತರ ಪ್ರದೇಶಗಳ ರೈತರು ಬಸವನಗುಡಿ ದೇವಾಲಯದ ಮುಂದೆ ತಾವು ಬೆಳೆದ ಕಡಲೆಕಾಯಿ ರಾಶಿ ಹಾಕಿಕೊಂಡು ವ್ಯಾಪಾರ ಮಾಡುವುದು ಮಾಮೂಲಾಗಿರುತ್ತಿತ್ತು.

ಆದರೆ ಈ ಬಾರಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇವಾಲಯದ ಮುಂಭಾಗ ಕಡಲೆಕಾಯಿ ಮಾರಾಟಕ್ಕೆ ಅವಕಾಶ ನಿರಾಕರಿಸಿದ್ದರಿಂದ ದೇವಾಲಯದ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಕಡೆ ಕಾರ್ತೀಕ ಸೋಮವಾರವಾದ ಇಂದು ಬಸವನಗುಡಿಯಲ್ಲಿರುವ ದೊಡ್ಡ ಗಣಪತಿಗೆ ಕಡಲೆಕಾಯಿ ಮತ್ತು ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ಸಮೀಪದಲ್ಲಿರುವ ಬಸವನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಈ ಬಾರಿ ಸರಳ ಕಡಲೆಕಾಯಿ ಪರಿಷೆ ನೆರವೇರಿಸಲಾಯಿತು. ಕಡಲೆಕಾಯಿ ಪರಿಷೆ ಇಲ್ಲದಿದ್ದರೂ ಕಡೇ ಕಾರ್ತೀಕ ಸೋಮವಾರದಂದು ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿ ವಾಪಸಾದರು.