ಬಜೆಟ್ ಅನುದಾನ ಬಳಸುವಲ್ಲಿ ಮುಗ್ಗರಿಸಿದ ಬೊಮ್ಮಾಯಿ ಸರ್ಕಾರ

Social Share

ಬೆಂಗಳೂರು,ಜ.24- ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಅತ್ಯಂತ ಹಿಂದುಳಿದ ತಾಲೂಕುಗಳ ಕಲ್ಯಾಣಕ್ಕಾಗಿ ರೂಪಿಸಿರುವ ವಿಶೇಷ ಅಭಿವೃದ್ಧಿ ಯೋಜನೆಯನ್ನು ಚುರುಕುಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಬಜೆಟ್ ವರ್ಷ ಮುಗಿಯುತ್ತಾ ಬಂದರೂ ವಿಶೇಷ ಅಭಿವೃದ್ಧಿ ಯೋಜನೆಯ ಶೇಕಡಾವಾರಿನಲ್ಲಿ ಕಾಲು ಭಾಗವೂ ಪ್ರಗತಿ ಕಂಡಿಲ್ಲ. ಮೂರನೇ ತ್ರೈಮಾಸಿಕ ಅಂತ್ಯವಾಗಿ ಬಜೆಟ್ ವರ್ಷದ ಕೊನೆ ತ್ರೈಮಾಸಿಕ ಪ್ರಗತಿಯಲ್ಲಿದ್ದರೂ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಬಳಕೆ ಕುಂಟುತ್ತಲೇ ಸಾಗುತ್ತಿದೆ.

ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅನುದಾನ ಬಳಸುವಲ್ಲಿ ಮುಗ್ಗರಿಸಿದೆ. ಡಾ.ನಂಜುಂಡಪ್ಪ ವರದಿ ಯಂತೆ ಹಿಂದುಳಿದ ತಾಲೂ ಕುಗಳಿಗೆ ವಿಶೇಷ ಅಭಿ ಒವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಈ ಯೋಜನೆಗೆ ಪ್ರತಿವರ್ಷ ಕೋಟ್ಯಂತರ ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆದರೆ ಬೊಮ್ಮಾಯಿ ಸರ್ಕಾರ ತಮ್ಮ ಆಡಳಿತಾವಯಲ್ಲೂ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದ ಸಮರ್ಪಕ ಬಳಕೆಯಲ್ಲಿ ಎಡವಿದ್ದಾರೆ.

ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಗತಿ ಕೇವಲ ಶೇ.23ರಷ್ಟಾಗಿದೆ. 2022-23 ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ ಬೊಮ್ಮಾಯಿ ಸರ್ಕಾರ ಈವರೆಗೆ 3,426.37 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆರ್ಥಿಕ ವರ್ಷದ 9 ತಿಂಗಳು ಪೂರ್ಣಗೊಂಡಿದೆ. ಆದರೆ ಪ್ರಗತಿ ಕಂಡಿದ್ದು ಎಳ್ಳಷ್ಟು.

ಮೂರನೇ ತ್ರೈಮಾಸಿಕದಲ್ಲೂ ವಿಶೇಷ ಅಭಿವೃದ್ಧಿ ಯೋಜನೆ ಪ್ರಗತಿಗೆ ಚುರುಕು ಸಿಗುತ್ತದೆ ಅಂದುಕೊಂಡರೆ ಅದು ಸಾಧ್ಯವಾಗಿಲ್ಲ. 13 ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2022-23ಸಾಲಿನ ನವೆಂಬರ್ವರೆಗೆ ಬಿಡುಗಡೆ ಯಾದ ಅನುದಾನ ಕೇವಲ 876.94 ಕೋಟಿ ರೂ. ಮಾತ್ರ. ಒಟ್ಟು 3,426.37 ಕೋಟಿ ಅನುದಾನ ಹಂಚಿಕೆಯಲ್ಲಿ ಈವರೆಗೆ ಕೇವಲ 876.94 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.

ಆ ಮೂಲಕ ಶೇ 26ರಷ್ಟು ಅಷ್ಟೇ ಪ್ರಗತಿ ಕಂಡಿದೆ. ಈ ಅತ್ಯಲ್ಪ ಬಿಡುಗಡೆಯಾದ ಅನುದಾನದ ಪೈಕಿ ಈವರೆಗೆ ಖರ್ಚು ಮಾಡಿದ್ದು ಕೇವಲ 791.42 ಕೋಟಿ ರೂ. ಮಾತ್ರ. ಇನ್ನು ಒಟ್ಟು ಹಂಚಿಕೆಯಲ್ಲಿ ಈವರೆಗೆ ಬೊಮ್ಮಾಯಿ ಸರ್ಕಾರ ವೆಚ್ಚ ಮಾಡಿದ್ದು ಕೇವಲ ಶೇ. 23.10ರಷ್ಟು ಮಾತ್ರ ಎಂದು ಸಾಂಖ್ಯಿಕ ಇಲಾಖೆಯ ಅಂಕಿಅಂಶ ತಿಳಿಸಿದೆ. ಒಟ್ಟು 7 ಇಲಾಖೆಗಳು ಅತ್ಯಂತ ಕಳಪೆ ಪ್ರಗತಿ ತೋರಿವೆ.

ಇಲಾಖಾವಾರು ಪ್ರಗತಿ ಹೀಗಿದೆ :
ಲೋಕೋಪಯೋಗಿ ಇಲಾಖೆಗೆ ಒಟ್ಟು 70 ಕೋಟಿ ರೂ. ಹಂಚಿಕೆಯಾಗಿದೆ. ಆದರೆ ಬಿಡುಗಡೆಯೂ ಶೂನ್ಯ, ವೆಚ್ಚವೂ ಶೂನ್ಯ. ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 75 ಕೋಟಿ ರೂ. ಹಂಚಿಕೆಯಾಗಿದ್ದು, ಬಿಡುಗಡೆಯಾಗಿರುವುದು 2.50 ಕೋಟಿ.

ಆದರೆ ವೆಚ್ಚ ಹಾಗೂ ಪ್ರಗತಿ ಕಂಡಿದ್ದು ಶೂನ್ಯ. ಇತ್ತ ವಸತಿ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 450 ಕೋಟಿ. ಬಿಡುಗಡೆ 37.50 ಕೋಟಿ, ವೆಚ್ಚ 306 ಕೋಟಿ ರೂ. ಆಗಿದ್ದು, ಶೇ 68ರಷ್ಟು ಪ್ರಗತಿ ಕಂಡಿದೆ. ಯೋಜನಾ ಇಲಾಖೆಯಲ್ಲಿ ಒಟ್ಟು 1,000 ಕೋಟಿ ರೂ.ಹಂಚಿಕೆ ಮಾಡಲಾಗಿದೆ. ಬಿಡುಗಡೆಯಾಗಿರವುದು 250 ಕೋಟಿ, ವೆಚ್ಚವಾಗಿರುವುದು 96.40 ಕೋಟಿ. ಆ ಮೂಲಕ ಪ್ರಗತಿ ಕೇವಲ 9.65ರಷ್ಟು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು 85 ಕೋಟಿ ರೂ. ಹಂಚಿಕೆಯಾಗಿದೆ. ಈವರೆಗೆ ಬಿಡುಗಡೆಯಾಗಿದ್ದು, 70 ಕೋಟಿ, ವೆಚ್ಚ 70 ಕೋಟಿ ರೂ. ಪ್ರಗತಿ ಕಂಡಿರುವುದು ಶೇ 82.35ರಷ್ಟು. ಕೃಷಿ ಇಲಾಖೆಯಲ್ಲಿ ಒಟ್ಟು 45 ಕೋಟಿ ರೂ. ಹಂಚಿಕೆ ಮಾಡಿದೆ. ಈವರೆಗೆ 21 ಕೋಟಿ ರೂ. ಬಿಡುಗಡೆ ಮಾಡಿದೆ. 20.02 ಕೋಟಿ ರೂ. ವೆಚ್ಚ ಮಾಡಿದ್ದು, ಈವರೆಗೆ ಶೇ 44.49ರಷ್ಟು ಪ್ರಗತಿ ಕಂಡಿದೆ.
ಇನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿದ್ದು, 30 ಕೋಟಿ ರೂ., 15 ಕೋಟಿ ರೂ. ಬಿಡುಗಡೆಯಾಗಿದ್ದು, 15 ಕೋಟಿ ವೆಚ್ಚ ಮಾಡಿದ್ದು, ಶೇ 50ರಷ್ಟು ಪ್ರಗತಿ ಕಂಡಿದೆ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಒಟ್ಟು 60 ಕೋಟಿ ರೂ. ಹಂಚಿಕೆ ಮಾಡಿದೆ. ಬಿಡುಗಡೆ 36.16 ಕೋಟಿ ರೂ, ವೆಚ್ಚವಾಗಿದ್ದು 18.56 ಕೋಟಿ, ಪ್ರಗತಿ ಕಂಡಿದ್ದು ಶೇ.30.93 ಇನ್ನು ಆರೋಗ್ಯ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 483.20 ಕೋಟಿ. ಬಿಡುಗಡೆ ಮಾಡಿರುವುದು 264.70 ಕೋಟಿ ರೂ., 198.75 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಪ್ರಗತಿಯಾಗಿರುವುದು 41.13%. ಇತ್ತ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಒಟ್ಟು 527.67 ಕೋಟಿ ಹಂಚಿಕೆಯಾಗಿದೆ. ಆ ಪೈಕಿ 20.29 ಕೋಟಿ ಬಿಡುಗಡೆಯಾಗಿದ್ದರೆ, 40.41ಕೋಟಿ ರೂ. ವೆಚ್ಚವಾಗಿದೆ. ಕೇವಲ 7.66% ಪ್ರಗತಿ ಕಂಡಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿದ್ದು 50 ಕೋಟಿ, ಈ ಪೈಕಿ ಬಿಡುಗಡೆಯಾಗಿರುವುದು 1.50 ಕೋಟಿ ರೂ., ವೆಚ್ಚವಾಗಿರುವುದು 1.50 ಕೋಟಿ ರೂ. ಪ್ರಗತಿ ಕಂಡಿರುವುದು ಕೇವಲ 3%. ಇನ್ನು ಶಿಕ್ಷಣ ಇಲಾಖೆಯಲ್ಲಿ ಒಟ್ಟು ಹಂಚಿಕೆಯಾಗಿರುವುದು 443.26 ಕೋಟಿ ರೂ., ಬಿಡುಗಡೆಯಾಗಿರುವುದು 140.87 ಕೋಟಿ, ವೆಚ್ಚವಾಗಿದ್ದು 17.94 ಕೋಟಿ ರೂ.

ಪ್ರಗತಿ ಕಂಡಿದ್ದು ಕೇವಲ 4.05%. ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಒಟ್ಟು 107.50 ಕೋಟಿ ಹಂಚಿಕೆಯಾಗಿದೆ. ಈ ಪೈಕಿ 17.40 ಕೋಟಿ ಬಿಡುಗಡೆಯಾಗಿದ್ದರೆ, 6.75 ಕೋಟಿ ವೆಚ್ಚವಾಗಿದ್ದು, ಕೇವಲ 6.28% ಪ್ರಗತಿಯಾಗಿದೆ ಎಂದು ಕೆಡಿಪಿ ಅಂಕಿ – ಅಂಶ ನೀಡಿದೆ.
ಇಲಾಖಾವಾರು ಬಜೆಟ್ ಅನುಷ್ಠಾನ – ಶೇ 55.82
ಪ.ಜಾತಿ ಉಪಯೋಜನೆ- ಶೇ 49.44
ಪ.ಪಂಗಡ ಉಪಯೋಜನೆ- ಶೇ.47.27
ಕೇಂದ್ರ ಪುರಸ್ಕೃತ ಯೋಜನೆ- ಶೇ 47.92
ಬಾಹ್ಯಾನುದಾನಿತ ಯೋಜನೆ- ಶೇ 31.93
ಮಹಿಳೆ/ಮಕ್ಕಳ ಬಜೆಟ್- ಶೇ 55.9

Articles You Might Like

Share This Article