ಬೆಂಗಳೂರು,ಜ.3- ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬೀದರ್ ಸೇರಿದಂತೆ ಈ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹತ್ತಿಯನ್ನು ಯಥೇಚ್ಚವಾಗಿ ಬೆಳೆಯುತ್ತಾರೆ. ಇಲ್ಲಿ ಜವಳಿ ಪಾರ್ಕ್ ಪ್ರಾರಂಭವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಜವಳಿ ಪಾರ್ಕ್ ಪ್ರಾರಂಭಿಸಲು ಬರುವವರಿಗೆ ಸರ್ಕಾರ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ. ಅವರಿಗೆ ಪವನ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವವರಿಂದ ರಿಯಾಯ್ತಿ ದರದಲ್ಲಿ ವಿದ್ಯುತ್ ನೀಡುವುದು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದಲೇ ತರಬೇತಿ ನೀಡಿ ನುರಿತ ಕೌಶಲ್ಯ ಕಾರ್ಮಿಕರನ್ನು ಒದಗಿಸಲಿದ್ದೇವೆ ಎಂದರು.
ಜವಳಿ ಪಾರ್ಕ್ ಆರಂಭವಾದರೆ ಹತ್ತಿ ನೂಲುವುದು, ಬೀಜ ತೆಗೆಯುವುದು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಸಹಾಯವಾಗುತ್ತದೆ. ಟೆಕ್ಸ್‍ಟೈಲ್ ಪಾರ್ಕ್ ಆರಂಭಿಸಲು ಮುಂದೆ ಬರುವ ಉದ್ಯಮಿಗಳಿಗೆ ಸರ್ಕಾರ ಅನೇಕ ರೀತಿಯ ನೆರವುಗಳನ್ನು ನೀಡಲಿದೆ ಎಂದು ಆಶ್ವಾಸನೆ ಕೊಟ್ಟರು.
ಈ ಭಾಗವನ್ನು ಟೆಕ್ಸ್‍ಟೈಲ್ ಹಬ್ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬರುವ ಉದ್ಯಮಿಗಳಿಗೆ ಅಗತ್ಯವಾದ ನೀರು, ರಸ್ತೆ, ವಿದ್ಯುತ್, ಭೂಮಿ ಎಲ್ಲವನ್ನು ಕಾಲಮಿತಿಯೊಳಗೆ ನೀಡಲಿದೆ. ಉದ್ಯಮಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಲು ದೇಶ-ವಿದೇಶಗಳಿಂದ ದೊಡ್ಡ ಮಟ್ಟದಲ್ಲಿ ಉದ್ಯಮಿಗಳು ಆಗಮಿಸುತ್ತಾರೆ. ಆದರೆ ನಮ್ಮವರೇ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ ಎಂದರೆ ತುಂಬ ಬೇಸರವಾಗುತ್ತದೆ. ಈ ಭಾಗದಲ್ಲಿ ಅನೇಕರು ಆರ್ಥಿಕವಾಗಿ ಸಾಕಷ್ಟು ಪ್ರಬಲರಾಗಿದ್ದಾರೆ. ನೀವು ಉದ್ಯಮ ಆರಂಭಿಸಲು ಮುಂದೆ ಬಂದರೆ ಸರ್ಕಾರ ನಿಮಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅಭಯ ನೀಡಿದರು.
100 ಕೋಟಿ ಬಂಡವಾಳ ಹೂಡಿದರೆ ನಿಮಗೆ ಶೇ.40ರಷ್ಟು ರಿಯಾಯ್ತಿ ಸಿಗಲಿದೆ. ಶೇ.60ರಷ್ಟು ನೀವು ಏಕಕಾಲದಲ್ಲೇ ಬಂಡವಾಳ ಹಾಕಬೇಕಿಲ್ಲ. ನಮ್ಮ ಇಲಾಖೆ ವತಿಯಿಂದಲೇ ಸಾಲವನ್ನು ಸಹ ನೀಡುತ್ತೇವೆ. ಅದನ್ನು ನೀವು ಕಂತುಗಳಲ್ಲಿ ಪಾವತಿಸಬಹುದು. ಮನಸ್ಸು ಮಾಡಿ ಬಂಡವಾಳ ಹೂಡಲು ಮುಂದೆ ಬನ್ನಿ ಎಂದು ಕರೆ ನೀಡಿದರು.
ಕಲಬುರಗಿಯಲ್ಲಿ ಒಟ್ಟು 1600 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗೆ ಗುರುತಿಸಲಾಗಿದೆ. ಶೀಘ್ರದಲ್ಲೇ ಇದರ ಭೂ ಸ್ವಾೀನ ಪ್ರಕ್ರಿಯೆಯು ಆರಂಭವಾಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದೆ ಬರುವವರ ಸಂಖ್ಯೆ ಅಕವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವು ರಿಯಾಯ್ತಿಗಳ ಘೋಷಣೆ:
ಸಚಿವ ಮುರುಗೇಶ್ ನಿರಾಣಿಯವರು ಇದೇ ಸಂದರ್ಭದಲ್ಲಿ ಹಲವು ವಿಶೇಷ ಸವಲತ್ತುಗಳನ್ನು ಸಹ ಪ್ರಕಟಿಸಿದರು. ಪರಿಶಿಷ್ಟ ಜಾತಿ/ವರ್ಗದವರು ಉದ್ಯಮ ಆರಂಭಿಸುವ ಉದ್ಯಮಿಗಳಿಗೆ ಶೇ.75ರಷ್ಟು ಸರ್ಕಾರವೇ ಸಬ್ಸಿಡಿಯನ್ನು ನೀಡಲಿದೆ. ಉಳಿದಿರುವ ಶೇ.25ರಷ್ಟು ಹಣವನ್ನು ಬ್ಯಾಂಕ್‍ನಿಂದ ಸಾಲ ಪಡೆದು ಕಂತಿನ ರೂಪದಲ್ಲಿ ನೀಡಬಹುದು ಎಂದು ತಿಳಿಸಿದರು.
ಕೇವಲ ಪರಿಶಿಷ್ಟ ಜಾತಿ/ವರ್ಗದವರಿಗೆ ಮಾತ್ರವಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ವರ್ಗದವರು ಉದ್ಯಮ ಆರಂಭಿಸಲು ಮುಂದೆ ಬಂದರೆ ಅವರಿಗೂ ಸಹ ನಮ್ಮ ಇಲಾಖೆ ಶೇ.75ರಷ್ಟು ಸಬ್ಸಿಡಿ ನೀಡುತ್ತೇವೆ. ಒಂದು ಕೋಟಿ ಉದ್ಯಮ ಆರಂಭಿಸಲು ಮುಂದೆ ಬಂದರೆ 75 ಲಕ್ಷ ಈ ವರ್ಗದವರಿಗೆ ಸಬ್ಸಿಡಿ ಸಿಗಲಿದೆ. ಶೇ.25ರಷ್ಟು ಮಾತ್ರ ನೀವು ಬ್ಯಾಂಕ್‍ನಿಂದ ಸಾಲ ಪಡೆದು ಆ ಹಣವನ್ನು ಸಹ ಕಂತಿನ ರೂಪದಲ್ಲಿ ಹಂತ ಹಂತವಾಗಿ ಪಾವತಿಸಬಹುದು ಎಂದು ಮಾಹಿತಿ ನೀಡಿದರು.
ಬೇರೆ ರಾಜ್ಯಗಳಲ್ಲಿ ಕೈಗಾರಿಕೆ ಆರಂಭಿಸುವ ಉದ್ಯಮಿಗಳಿಗೆ ಅಲ್ಲಿನ ಸರ್ಕಾರ ಶೇ.5ರಷ್ಟು ಸಬ್ಸಿಡಿಯನ್ನು ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಶೇ.8ರಷ್ಟು ಸಬ್ಸಿಡಿಯನ್ನು ಕೊಡುತ್ತೇವೆ. ಇದು ಕೈಗಾರಿಕೆಗಳ ಬಗ್ಗೆ ನಮ್ಮ ಸರ್ಕಾರ ಇಟ್ಟುಕೊಂಡಿರುವ ಬದ್ದತೆಯನ್ನು ತೋರಿಸುತ್ತದೆ ಎಂದರು.
ರಾಜ್ಯ ಸರ್ಕಾರವು ಕೈಗಾರಿಕಾ ವಲಯಕ್ಕೆ ಒಂದು ಜಿಲ್ಲೆ ಒಂದು ಉತ್ಪಾದನೆ ಎಂದು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಐಎಡಿಬಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಉದ್ಯಮ ನಡೆಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗೆ ಕರ್ನಾಟಕವನ್ನು ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಸರ್ವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ವಿದ್ಯಾರ್ಥಿಗಳಿಗೆ ಛಲ ಇರಬೇಕು. ಉದ್ಯಮಿಯಾದರಷ್ಟೇ ಸಾಲದು ಉದ್ಯಮಿಯಾಗುವುದರ ಜೊತೆಗೆ ಹತ್ತಾರು ಜನರಿಗೆ ಉದ್ಯೋಗ ಕೊಡುವ ಮಟ್ಟಕ್ಕೆ ಬೆಳೆಯಬೇಕು. ಇನೋಸಿಸ್‍ನ ಸುಧಾ ನಾರಾಯಣಮೂರ್ತಿ, ವಿಆರ್‍ಎಲ್‍ನ ವಿಜಯ ಸಂಕೇಶ್ವರ ಸೇರಿದಂತೆ ಹಲವು ನಿಮಗೆ ಪ್ರೇರಣೆಯಾಗಬೇಕು ಎಂದರು.
ಮಹಿಳಾ ಉದ್ದಿಮೆದಾರರಿಗೂ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿದೆ. ನಿಮಗೆ ಇನ್ಪೋಸಿಸ್‍ನ ಸುಧಾಮೂರ್ತಿ ಪ್ರೇರಣೆಯಾಗಬೇಕು, ಕೇವಲ ಮನೆಗೆ ಸೀಮಿತವಾಗದೆ ಸರ್ಕಾರಗಳ ಯೋಜನೆಯನ್ನು ಬಳಕೆ ಮಾಡಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ಮಾಡಿದರು.
ಕಲಬುರಗಿ ಸಂಸದ ಡಾ.ಉಮೇಶ್ ಕತ್ತಿ, ಶಾಸಕರಾದ ಬಸವರಾಜ್ ಮತ್ತಿಮೊಡ , ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ಅಪ್ಪುಗೌಡ ಪಾಟೀಲ್ ರೇವೂರ, ವಿಧಾನಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಜಿ.ಟಿ.ಪಾಟೀಲ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
