FACEBOOK LIVEನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಕಮಲ್‍ಪಂತ್

ಬೆಂಗಳೂರು,ಜು.17- ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು. ಹಲವಾರು ನಾಗರಿಕರು ತಮ್ಮ ತಮ್ಮ ಸಮಸ್ಯೆಗಳನ್ನು ಆಯುಕ್ತರ ಬಳಿ ಹೇಳಿಕೊಂಡು ಉತ್ತರ ಪಡೆದುಕೊಂಡರು.

ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ ಕೆಲಸಗಾರರನ್ನು ಒಳಗೆ ಬಿಡುತ್ತಿಲ್ಲ ಎಂದು ಆಯುಕ್ತರ ಬಳಿ ಅಳಲು ತೋಡಿಕೊಂಡಾಗ ಇದು ಕೋವಿಡ್ ಸಮಯವಾಗಿ ರುವುದರಿಂದ ಸುರಕ್ಷತಾ ನಿಯಮ ಪಾಲಿಸಬೇಕು. ಅಪಾರ್ಟ್‍ಮೆಂಟ್ ಅಸೋಸಿಯೇಷನ್‍ನವರು ಅಲ್ಲಿನ ನಿವಾಸಿಗಳ ಹಿತದೃಷ್ಟಿಯಿಂದ ಹೊರಗಿನವರನ್ನು ಬಿಡುತ್ತಿಲ್ಲ.

ಅದಕ್ಕೆ ಸಹಕರಿಸಿ ಎಂದು ಹೇಳಿದರು. ಮತ್ತೊಬ್ಬ ನಾಗರಿಕರು ಮನೆ ಬದಲಾವಣೆ ಮಾಬೇಕು. ಅದಕ್ಕೆ ಅವಕಾಶವಿದೆಯೇ ಎಂದು ಕೇಳಿದಾಗ, ಇಷ್ಟು ದಿನವೇ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ತಡೆಯಿರಿ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಅಡೆತಡೆಗಳಾಗಬಹುದು ಎಂದರು.

ನಗರದ ನಿವಾಸಿಯೊಬ್ಬರು ತಮ್ಮ ತಂದೆ-ತಾಯಿ ಚನ್ನೈನಲ್ಲಿದ್ದು, ನಗರಕ್ಕೆ ಕರೆದುಕೊಂಡು ಬರಬಹುದೇ ಎಂದು ಆಯುಕ್ತರನ್ನು ವಿಚಾರಿಸಿದಾಗ, ಅನಿವಾರ್ಯವಿದ್ದರೆ ಮಾತ್ರ ಕರೆತನ್ನಿ. ಇಲ್ಲವೆಂದಾದರೆ ಕೆಲ ಸಮಯದ ನಂತರ ಕರೆದುಕೊಂಡು ಬನ್ನಿ ಎಂದು ತಿಳಿಸಿದರು. ಒನ್‍ವೇ ರಸ್ತೆಯ ಗಾತ್ರ ಕಿರಿದಾಗಿದೆ. ವಾಹನಗಳು ಸಂಚರಿಸಲು ಕಷ್ಟವಾಗುತ್ತದೆ. ಅಂತಹ ರಸ್ತೆಯನ್ನು ವಿಸ್ತರಿಸಬೇಕು ಎಂದಾಗ, ತಕ್ಷಣಕ್ಕೆ ಅದು ಅಸಾಧ್ಯ. ಪರಿಶೀಲಿಸುವುದಾಗಿ ಹೇಳಿದರು.

ಪೊಲೀಸ್‍ವಸತಿ ಸಂಕೀರ್ಣ ಶಿಥಿಲಗೊಂಡಿರುವ ಬಗ್ಗೆ ನಾಗರಿಕರೊಬ್ಬರು ಆಯುಕ್ತರ ಗಮನ ಸೆಳೆದಾಗ, ಹೊಸದಾಗಿ ಪೊಲೀಸ್ ಕ್ವಾರ್ಟಸ್ ನಿರ್ಮಾಣವಾಗುತ್ತಿದೆ ಎಂದರು. ಇತ್ತೀಚೆಗೆ ತಳ್ಳುಗಾಡಿಯವರು ಧ್ವನಿವರ್ಧಕಗಳನ್ನು ಬಳಸುತ್ತಾ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಹಲವರು ಕೇಳಿಕೊಂಡರು. ಧ್ವನಿವರ್ಧಕ ಬಳಸುವುದು ಕಾನೂನಿಗೆ ವಿರುದ್ಧ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.